1000 ಕೋವಿಡ್ ಮೃತರಿಗೆ ಪಿಂಡ ಪ್ರದಾನ ಮಾಡಿದ ಸಚಿವ ಆರ್.ಅಶೋಕ್

ಕೊರೋನಾ ಸೋಂಕಿನಿಂದ ಮೃತಪಟ್ಟ 1000ಕ್ಕೂ ಹೆಚ್ಚು ಅನಾಥ ಶವಗಳಿಗೆ ಸಚಿವ ಆರ್ ಅಶೋಕ್ ಅವರು ಸೋಮವಾರ ಪಿಂಡ ಪ್ರದಾನ ಮಾಡಿದರು. 
ಆರ್. ಅಶೋಕ್
ಆರ್. ಅಶೋಕ್
Updated on

ಮೈಸೂರು: ಕೊರೋನಾ ಸೋಂಕಿನಿಂದ ಮೃತಪಟ್ಟ 1000ಕ್ಕೂ ಹೆಚ್ಚು ಅನಾಥ ಶವಗಳಿಗೆ ಸಚಿವ ಆರ್ ಅಶೋಕ್ ಅವರು ಸೋಮವಾರ ಪಿಂಡ ಪ್ರದಾನ ಮಾಡಿದರು. 

ರಾಜಧಾನಿ ಬಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೋನಾಗೆ ಬಲಿಯಾದವರ ಶವಗಳನ್ನು ಪಡೆಯಲು ಕುಟುಂಬಸ್ಥರು ಮುಂದೆ ಬಾರದಿದ್ದ ಹಿನ್ನೆಲೆಯಲ್ಲಿ ಜೂನ್ 2ರಂದು ಮಳವಳ್ಳಿಯ ಬೆಳಕವಾಡಿ ಬಳಿಯ ಶಿಂಷಾನದಿ ದಡದಲ್ಲಿ ಸುಮಾರು 1000 ಮೃತದೇಹಗಳ ಆಸ್ತಿ ವಿಸರ್ಜನೆ ಮಾಡಲಾಗಿತ್ತು. 

ಅನಾಥವಾಗಿ ಶವಸಂಸ್ಕಾರಕ್ಕೊಳಗಾದವರಿಗೆ ಮೋಕ್ಷ ದೊರಕಿಸಲು ಸೋಮವಾರ ಗೋಸಾಯ್ ಘಾಟ್ ನಲ್ಲಿ ಸಾಮೂಹಿಕ ಪಿಂಡ ಪ್ರದಾನ ಕಾರ್ಯಕ್ರಮ ಜರುಗಿತು. ಹಿಂದೂ ಸಂಪ್ರದಾಯದಂತೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಎಡೆ ಪೂಜೆ, ಪಿಂಡ ಪ್ರದಾನಗಳನ್ನು ಸಚಿವ ಆರ್. ಆಶೋಕ್ ಮೃತರ ಕುಟುಂಬಸ್ಥರ ಪರವಾಗಿ ವಿಧಿ-ವಿಧಾನ ನೆರವೇರಿಸಿದರು. 

ಬೆಳಿಗ್ಗೆ 8 ಗಂಟೆಯಿಂದಲೇ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಗೋಸಾಯ್ ಘಾಟ್ ನಲ್ಲಿ ಪೂಜಾ ಸಿದ್ಧತಾ ಕಾರ್ಯ ಆರಂಭಗೊಂಡಿತ್ತು. ವೇದಿಕೆಗೆ ಶ್ರೀ ಮೋಕ್ಷ ನಾರಾಯಣ ಭಾವಚಿತ್ರವನ್ನು ಅಳವಡಿಸಿ ಅದರ ಎದುರು ಕಳಸಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕಳಸಗಳಿಗೆ ಹೂಮಾಲೆ, ತುಳಸಿ ಮಾಲೆ ಹಾಕಿ ಸಿಂಗರಿಸಲಾಗಿತ್ತು. ಕಳಸಗಳ ಬಳಿ ವಿವಿಧ ಫಲಗಳನ್ನು ಇಟ್ಟು ಪೂಜೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. 

2-3 ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಉಪ ಆಯುಕ್ತ ಅಶ್ವಥಿ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. 

ಸಾಮೂಹಿಕ ಪಿಂಡ ಪ್ರದಾನ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದ ಮೃತಪಟ್ಟ ಕೆಲವರ ಕುಟುಂಬದವರು ಹಲವು ಕಾರಣಗಳಿಂದ ಅಸ್ಥಿಯನ್ನು ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಸರ್ಕಾರದ ಪರ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಅಣ್ಣನಾಗಿ, ತಮ್ಮನಾಗಿ, ಮಗನಾಗಿ, ತಂದೆಯಾಗಿ ಹಾಗೂ ಆ ಕುಟುಂಬಗಳ ಸದಸ್ಯರಲ್ಲಿ ಒಬ್ಬನಾಗಿ ನಾನು ನನ್ನ ಕರ್ತವ್ಯ  ನಿರ್ವಹಿಸಿದ್ದೇನೆ. ಈ ಅನಾಥ ಅಸ್ಥಿಗಳನ್ನು ವಸರ್ಜಿಸುವ ಕೆಲಸವನ್ನು ಸರ್ಕಾರದ ವತಿಯಿಂದಲೇ ಜೂ.2ರಂದು ಮಾಡಲಾಗಿತ್ತು. 

ಈಗ ಸತ್ತವರಿಗೆ ಸದ್ಗತಿ ದೊರಕಿಸುವ ಕೆಲಸ ಮಾಡುತ್ತಿದ್ದೇವೆ. ಈ ಪುಣ್ಯಕಾರ್ಯದಿಂದ ಆತ್ಮತೃಪ್ತಿ ಸಿಕ್ಕಿದೆ. ಈ ಹಿಂದೆ ಅಸ್ಥಿ ವಿಸರ್ಜನೆ ಮಾಡಿದ ನಂತರ ಹಲವು ಕುಟುಂಬದ ಸದಸ್ಯರು ನನ್ನೊಂದಿಗೆ ಮಾತನಾಡಿ ನಾವು ಮಾಡಲಾಗದ ಕರ್ತವ್ಯವನ್ನು ನೀವು ನೆರವೇರಿಸಿ, ನಮ್ಮ ಕುಟುಂಬದಲ್ಲಿ ಒಬ್ಬರಾಗಿದ್ದೀರಿ ಎಂದು ದುಃಖಿತರಾಗಿ ಹೇಳಿದ ಸಂಗತಿ ಇನ್ನೂ  ನೆನಪಿದೆ. ಭಗವಂತನ ಇಚ್ಛೆಯಂತೆ ನನ್ನ ಕೈಯಲ್ಲಿ ಈ ಸತ್ಕಾರ್ಯಗಳನ್ನು ಮಾಡಿಸಲಾಗಿದ್ದು, ಇದೀಗ ಆ ಎಲ್ಲಾ ಅತೃಪ್ತ ಆತ್ಮಗಳ ಶಾಂತಿಗಾಗಿ ಪಿತೃಪಕ್ಷ ಹಿನ್ನೆಲೆಯಲ್ಲಿ ಸಾಮೂಹಿಕ ಪಿಂಡ ಪ್ರಧಾನ ನೆರವೇರಿಸಲಾಗಿದೆ. ಮೂರು ದಿನಗಳ ಕಾಲ ಗುರುಗಳ ಸಲಹೆ ಮೇರೆಗೆ ಶಾಖಾಹಾರ ಸೇವಿಸುವ ಮೂಲಕ ಪಥ್ಯ ಇರುವುದಾಗಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com