ಪ್ರವಾಸಿ ತಾಣಗಳ ವಿವರ ನೀಡುವಲ್ಲಿ ಕರ್ನಾಟಕ ಸರ್ಕಾರ ವಿಫಲ: ಅಧಿಕಾರಿಗಳು
ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಕೇಂದ್ರ ಸರಕಾರ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವೆ ಎರಡು ದಿನಗಳ ಸಭೆ ಗುರುವಾರ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಕೆಲವು ವಿಚಾರಗಳ ಸಂಬಂಧ ತಿಕ್ಕಾಟವೂ ನಡೆದಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ನಿನ್ನೆ ಪ್ರಸಾದ ಮತ್ತು ಸ್ವದೇಶ ದರ್ಶನ ಯೋಜನೆ ಕುರಿತಂತೆ ಚರ್ಚೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಅನುದಾನ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿ ಕೇಂದ್ರ ಸರಕಾರ ನೇರವಾಗಿ ರಾಜ್ಯ ಸರಕಾರಗಳತ್ತ ಬೆಟ್ಟು ಮಾಡಿದೆ. ಅಂದರೆ ಯೋಜನೆಗಳಿಗೆ ಇನ್ನೂ ಏಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಸರಕಾರ, ನೀವೇ ಸರಿಯಾಗಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಹೇಳಿದೆ.
ಕೇಂದ್ರ ಪ್ರವಾಸೋದ್ಯಮ ಹೆಚ್ಚುವರಿ ಮಹಾನಿರ್ದೇಶಕಿ ರೂಪಿಂದರ್ ಬ್ರಾರ್ ಮಾತನಾಡಿ, ಪ್ರಸಾದ್ ಯೋಜನೆಯಡಿ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಿಫಸವಾಗಿದೆ. ಸರಿಯಾಗಿ ಪ್ರಸ್ತಾಪವನೆ ಕಳುಹಿಸಿಲ್ಲ ಎಂದು ದೂರಿದ್ದಾರೆ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಆನಂದ್ ಸಿಂಗ್ ಅವರು ವಿಫಲ ಶಬ್ಧ ಬಳಸಬಾರದಿತ್ತು. ತಾಂತ್ರಿಕ ತೊಂದರೆ ಎನ್ನಬೇಕಿತ್ತು ಎಂದು ಹೇಳಿದ್ದಾರೆ.
ಪ್ರಸಾದ್ ಯೋಜನೆಯಡಿ ಪ್ರಾಚೀನ ದೇವಾಲಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಅನುದಾನ ಬಿಡುಗಡೆ ಮಾಡಿದೆ. ಆದರೆ, ರಾಜ್ಯಕ್ಕೆ ಒಂದು ರುಪಾಯಿ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಚಾಮುಂಡಿ ಬೆಟ್ಟ ಅಬಿವೃದ್ಧಿಗೆ ಪ್ರಸ್ತಾವನೆ ಕಳುಹಿಸಿದ್ದರೂ ಅದನ್ನು ತಿರಸ್ಕರಿಸಲಾಗಿತ್ತು. ಇದನ್ನು ಗಮನಕ್ಕೆ ತಂದ ಬಳಿಕ ಪ್ರತಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅಧಿಕಾರಿಗಳು, ಇದು ರಾಜ್ಯ ಸರ್ಕಾರದ ತಪ್ಪಿನಿಂದಾಗಿಯೇ ಆಗಿರುವುದು ಎಂದು ಆರೋಪ ಮಾಡಿದರು.
ಬಳಿಕ ಸ್ಪಷ್ಟನೆ ನೀಡಿದ ಆನಂದ್ ಸಿಂಗ್, ರಾಜ್ಯ ಸರ್ಕಾರದ ವೈಫಲ್ಯ ಎನ್ನುವ ಪದ ಬಳಸಿದ್ದು ಸರಿಯಲ್ಲ ಕೆಲ ತಾಂತ್ರಿಕ ಸಮಸ್ಯೆಗಳಿಂದ ರಾಜ್ಯಕ್ಕೆ ಯಾವುದೇ ಯೋಜನೆ ಸಿಕ್ಕಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರು, ಭಾರತದಲ್ಲಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು, ನಾವು ಪ್ರವಾಸಿಗರಿಗೆ ಮೊದಲು ಬಂದ ಆಧಾರದ ಮೇಲೆ ಐದು ಲಕ್ಷ ಉಚಿತ ವೀಸಾಗಳನ್ನು ನೀಡುತ್ತೇವೆಂದು ಹೇಳಿದರು.
169 ರಾಷ್ಟ್ರಗಳ ವೀಸಾ ವಿಸ್ತರಣೆ ಮಾಡುವ ಕುರಿತು ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಹೆಚ್ಚೆಚ್ಚು ಪ್ರವಾಸಿಗರು ಭಾರತಕ್ಕೆ ಬರುವಂತೆ ಮಾಡಲು ವಿವಿಧ ರಾಷ್ಟ್ರಗಳಲ್ಲಿ 20 ಮಂದಿ ಮಿಷನ್ ಅಧಿಕಾರಿಗಳನ್ನು ನೇಮಕ ಮಾಡಲು ಚಿಂತನೆಗಳು ನಡೆದಿವೆ. ಈ ಕುರಿತು ಪ್ರವಾಸೋದ್ಯಮ, ವಿದೇಶಾಂಗ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ಸಾಂಸ್ಕೃತಿಕ, ಗೃಹ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೊದಲ ಹಂತದ ಪಟ್ಟಿಯಲ್ಲಿ 20 ರಾಷ್ಟ್ರಗಳನ್ನು ಸೇರಿಸಲಾಗುತ್ತದೆ. ಈ ರಾಷ್ಟ್ರಗಳಿಗೆ ಅಧಿಕಾರಿಗಳ ನೇಮಕ ಮಾಡಿ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ನೀತಿಯನ್ನು ಕೂಡ ಅಂತಿಮಗೊಳಿಸಲಾಗುತ್ತಿದ್ದು, ಎಲ್ಲಾ ರಾಜ್ಯಗಳಿಂದ ಪ್ರತಿಕ್ರಿಯೆಯನ್ನು ಕೇಳಲಾಗಿದೆ ಎಂದರು.
ಈ ನೀತಿ ಅಡಿಯಲ್ಲಿ, ರಾಜ್ಯಗಳು ಮತ್ತು ಪ್ರವಾಸಿ ಮಾರ್ಗದರ್ಶಿಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದಿದ್ದಾರೆ. ಇದೇ ವೇಳೆ ಲಸಿಕೆ ಕುರಿತು ಮಾತನಾಡಿ, “ಲಸಿಕೆ ಇಲ್ಲದೇ ಹೋಗಿದ್ದರೆ, ಪ್ರವಾಸೋದ್ಯಮ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಕೋವಿಡ್-19 ಕಡಿಮೆಯಾದರೆ, ವಿಮಾನಯಾನ ಸಂಪರ್ಕ ಕೂಡ ಸುಧಾರಿಸುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ