ಮಾನವ ಕಳ್ಳಸಾಗಣೆ: ಯಲಹಂಕ ರೈಲ್ವೇ ನಿಲ್ದಾಣದಲ್ಲಿ 3 ಮಹಿಳೆಯರ ರಕ್ಷಣೆ

ಉದ್ಯೋಗ ಕೊಡಿಸುವ ಆಸೆ ತೋರಿಸಿ ದೆಹಲಿಯಿಂದ ಬೆಂಗಳೂರು ನಗರಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿರುವ ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉದ್ಯೋಗ ಕೊಡಿಸುವ ಆಸೆ ತೋರಿಸಿ ದೆಹಲಿಯಿಂದ ಬೆಂಗಳೂರು ನಗರಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿರುವ ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದೆ. 

ಮಹಿಳೆಯರಿಗೆ ಉದ್ಯೋಗ ಕೊಡಿಸುವ ಆಸೆ ತೋರಿಸಿ ಆರೋಪಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಈ ವೇಳೆ ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸೂಕ್ಷ್ಮತೆಯನ್ನು ಅರಿತ ಮಹಿಳೆಯರು ಸ್ಥಳದಿಂದ ತಪ್ಪಿಸಿಕೊಂಡು ಯಲಹಂಕ ರೈಲ್ವೇ ನಿಲ್ದಾಣ ತಲುಪಿದ್ದಾರೆ. ಇದೀಗ ಮಹಿಳೆಯರು ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದು, ಶೀಘ್ರದಲ್ಲೇ ತವರಿಗೆ ಮರಳಲಿದ್ದಾರೆಂದು ತಿಳಿದುಬಂದಿದೆ. 

ಮೂವರು ಮಹಿಳೆಯರ ಪೈಕಿ ಓರ್ವ ಮಹಿಳೆ ಘಾಜಿಯಾಬಾದ್'ನ ರಾಜಕೀಯ ಪಕ್ಷದ ಜಿಲ್ಲಾ ಮಟ್ಟದ ನಾಯಕರೊಬ್ಬರ ಪುತ್ರಿಯಾಗಿದ್ದು, ಇನ್ನಿಬ್ಬರು ಸಂಬಂಧಿಕರಾಗಿದ್ದಾರೆಂದು ತಿಳಿದುಬಂದಿದೆ. ಮೂವರು 20 ವರ್ಷದ ಮಹಿಳೆಯರಾಗಿದ್ದು,  ಆಗಸ್ಟ್ 30 ರಂದು ಇಂಡಿಗೋ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣದಿಂದ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 

ಇಬ್ಬರು ಮಹಿಳೆಯರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದು, ಇವೆಂಟ್ ಮ್ಯಾನೇಂಜ್ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬ ಯುವತಿ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ದೆಹಲಿಯಲ್ಲಿದ್ದ ಈ ಮೂವರು ಯುವತಿಯರಿಗೆ ಇವೆಂಟ್ ಮ್ಯಾನೇಜರ್ ಒಬ್ಬರ ಪರಿಚಯವಾಗಿದೆ. ಈತ ಅಂತರಾಷ್ಟ್ರೀಯ ಮಾನವ  ಕಳ್ಳಾಸಾಗಣೆಯಲ್ಲಿ ಪಾಲ್ಗೊಂಡಿರುವ  ಆರೋಪಗಳೂ ಇವೆ. 

ಈತನ ಮಾತುಗಳನ್ನು ನಂಬಿರುವ ಮೂವರು ಯುವತಿಯರು ಆಗಸ್ಟ್ 30ರಂದು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಮರುದಿನ ವ್ಯಕ್ತಿಯೊಬ್ಬ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಲಿದ್ದು, ಅಲ್ಲಿ ಸಂದರ್ಶನ ಇರುವುದಾಗಿ ಯುವತಿಯರಿಗೆ ತಿಳಿಸಿದ್ದಾನೆ. ಇದನ್ನು ನಂಬಿದ ಯುವತಿಯರು ವ್ಯಕ್ತಿಯೊಂದಿಗೆ ಕ್ಯಾಬ್ ನಲ್ಲಿ ಹೋಗಿದ್ದಾರೆ. ವ್ಯಕ್ತಿ ಚಂದ್ರಶೇಖರ್ ಲೇಔಟ್ ನಲ್ಲಿರುವ ಪಿಜಿಗೆ ಯುವತಿಯರನ್ನು ಕರೆದುಕೊಂಡು ಹೋಗಿದ್ದು, ರೂಮಿನೊಳಗೆ ಹೋಗುವಂತೆ ತಿಳಿಸಿ ಇದ್ದಕ್ಕಿದ್ದಂತೆ ಕೊಠಡಿಗೆ ಬೀಗ ಹಾಕಿದ್ದಾನೆ. 

ರೂಮಿನ ವಾತಾವರಣ ಅತ್ಯಂತ ಕೆಟ್ಟದಾಗಿರುವುದನ್ನು ನೋಡಿದ ಮಹಿಳೆಯರು ಸ್ಥಳದಲ್ಲಿನ ಸೂಕ್ಷ್ಮತೆಯನ್ನು ಅರಿತಿದ್ದಾರೆ. ಇದಲ್ಲದೆ, ಸ್ಥಳಕ್ಕೆ ಬರುವಾಗ ಕಟ್ಟಡದಲ್ಲಿ ಕುಡಿದ ಮತ್ತಿನಲ್ಲಿದ್ದ 6 ಮಂದಿ ಪುರುಷರನ್ನೂ ಯುವತಿಯರು ಗಮನಿಸಿದ್ದಾರೆ. ಕೊಠಡಿಯಲ್ಲಿ ಬಂಧನಕ್ಕೊಳಗಾಗಿದ್ದ ಯುವತಿಯರು ತಂತ್ರ ರೂಪಿಸಿ ಹೇಗೋ ವಾಚ್'ಮನ್ ನಿಂದ ತಪ್ಪಿಸಿಕೊಂಡು ಹೊರ ಬಂದಿದ್ದಾರೆ. ಈ ವೇಳೆ ಯುವತಿಯರ ಬಳಿ ರೂ.3000 ನಗದು ಇದ್ದ ಕಾರಣ ಯಲಹಂಕ ರೈಲ್ವೇ ನಿಲ್ದಾಣ ತಲುಪಿದ್ದಾರೆ. 

ರೈಲ್ವೇ ನಿಲ್ದಾಣದಲ್ಲಿ ಪೊಲೀಸರನ್ನು ಸಂಪರ್ಕಿಸಿರುವ ಯುವತಿಯರು ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಪೊಲೀಸರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com