ಶೀಘ್ರದಲ್ಲೇ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನಗಳಲ್ಲಿ ರಾಜ್ಯದ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಪ್  ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. 
ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ
Updated on

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯದ ದೇವಸ್ಥಾನಗಳಲ್ಲಿ ರಾಜ್ಯದ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಪ್  ಹಾಗೂ ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. 

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುವ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಇರುವ ಪ್ರಮುಖ ದೇವಸ್ಥಾನಗಳ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಇಲಾಖೆಯಲ್ಲಿ  ನಾವು ಮಾಡಬೇಕಾದಂತಹ ಕೆಲಸ ಬಹಳ ಇದೆ. ಇಡೀ ಜಗತ್ತಿನಲ್ಲಿಯೇ ನಮ್ಮ ಸಂಸ್ಕೃತಿ, ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸ ನಮ್ಮದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಜರಾಯಿ ಇಲಾಖೆಯಲ್ಲಿ  ಸಿಬ್ಬಂದಿ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇಲಾಖೆಯ ಕಾರ್ಯದರ್ಶಿಯ ಜೊತೆಗೆ  ಚರ್ಚೆ ನಡೆಸಿದ್ದು, ಶೀಘ್ರವೇ ಮುಖ್ಯಮಂತ್ರಿಗಳ ಜೊತೆ  ಚರ್ಚಿಸಿ ಭರ್ತಿ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ. 

ಇಲಾಖೆಯಲ್ಲಿ  ಐದು ವರ್ಷಕ್ಕಿಂತ  ಹೆಚ್ಚಿನ ಸಮಯ ಒಂದೆ ಕಡೆ  ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ  ಅಥವಾ ಇಲಾಖಾ ಹಂತದಲ್ಲಿ ಅವ್ಯವಹಾರ ನಡೆಯುತ್ತಿದ್ದರೆ,  ಹಿರಿಯ ಅಧಿಕಾರಿಗಳು ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೆಂಗಳೂರಿನ ಕೆಲ ದೇವಸ್ಥಾನದ ಅವ್ಯವಹಾರದ ಬಗ್ಗೆ ಆರೋಪ ಕೇಳಿ ಬಂದಿರುವ ಹಿನ್ನಲೆ  ಮುಜರಾಯಿ ಇಲಾಖೆಯ ಆಯುಕ್ತರು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು. 

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕಮಿಟಿಗಳು ಇಲಾಖೆಯ ಮಾಹಿತಿಯನ್ನು ಧಾರ್ಮಿಕ ಪರಿಷತ್ ‌ಸದಸ್ಯರಿಗೆ ನೀಡುವುದಿಲ್ಲ ಎಂಬ ಆರೋಪ ಇದೆ. ಆಯುಕ್ತರು ಸಂಬಂಧ ಪಟ್ಟವರನ್ನು ಸಂಪರ್ಕಿಸಿ ಸದಸ್ಯರಿಗೆ ಮಾಹಿತಿ ನೀಡುವಂತೆ ಸೂಚಿಸಬೇಕು. ಮುಜರಾಯಿ  ಇಲಾಖೆಯಿಂದ ಸಾಮೂಹಿಕ ವಿವಾಹದ ಯೋಜನೆ ಜಾರಿಯಲ್ಲಿದ್ದು, ಅದನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸೂಚಿಸಿದರು.

ಮುಜರಾಯಿ ಇಲಾಖೆಯ ಅಡಿಯಲ್ಲಿ 34,559 ದೇವಾಲಯಗಳು ಬರುತ್ತವೆ, ಅದರಲ್ಲಿ 175 ವರ್ಗ-ಎ (ವಾರ್ಷಿಕ ಆದಾಯ ರೂ. 25 ಲಕ್ಷಕ್ಕಿಂತ ಹೆಚ್ಚು), 163 ವರ್ಗ-ಬಿ (ರೂ. 5-25 ಲಕ್ಷ) ಮತ್ತು 34,221 ವರ್ಗ-ಸಿ (ರೂ.5 ಲಕ್ಷಕ್ಕಿಂತ ಕಡಿಮೆ ಇರುವ ದೇವಾಲಯಗಳು ಬರುತ್ತವೆ. ಈ ದೇವಾಲಯಗಳಲ್ಲಿ ಸುಮಾರು 50,000 ಅರ್ಚಕರು, ಪ್ರಧಾನ ಅರ್ಚಕರು, ಗ್ರೂಪ್ ಸಿ ಮತ್ತು ಡಿ ಉದ್ಯೋಗಿಗಳು ಕೆಲಸ ಮಾಡುತ್ತಾರೆ, ಆದರೆ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗುವುದಿಲ್ಲ. ಅವರ ಸಂಬಳವನ್ನು ಆಯಾ ದೇವಸ್ಥಾನ ಟ್ರಸ್ಟ್‌ಗಳು ಪಾವತಿಸುತ್ತಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com