
ಗದಗ: ಜಿಲ್ಲೆಯ ಕೊಕ್ಕರಗುಂಡಿ ಗ್ರಾಮದ ಮಕ್ಕಳಿಗೆ ಬದುಕು ನಿತ್ಯವೂ ಹರಸಾಹಸ. ಎರಡು ಹೊಳೆಗಳನ್ನು ದಾಟಿ 5 ಕಿಲೋ ಮೀಟರ್ ನಡೆದುಕೊಂಡು ಹೋಗಿ ಶಾಲೆಯನ್ನು ಸೇರಬೇಕು. ಜೋರು ಮಳೆ ಬಂದಾಗಲಂತೂ ಇಲ್ಲಿನ ಮಕ್ಕಳ ಪಾಡು ಹೇಳತೀರದು.
ಕಳೆದ ವರ್ಷ ಕೊರೋನಾ ಲಾಕ್ ಡೌನ್ ಗಿಂತ ಮೊದಲು ಪರಿಸ್ಥಿತಿ ಇಷ್ಟೊಂದು ಕಷ್ಟವಿರಲಿಲ್ಲ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿತ್ತು. ಆದರೆ ಕೊರೋನಾ ಲಾಕ್ ಡೌನ್ ಆದ ನಂತರ ನಿಗದಿತವಾಗಿ ಬರುತ್ತಿದ್ದ ಬಸ್ ಸೇವೆ ಕಡಿಮೆಯಾಗಿ ಈಗ ಗ್ರಾಮಕ್ಕೆ ಬರುವುದು ಕೇವಲ ಎರಡು ಬಸ್ಸುಗಳು ಮಾತ್ರ ಅದು ಬೆಳಗ್ಗೆ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ.
ಇಷ್ಟು ಸಮಯ ಕೊರೋನಾ ಲಾಕ್ ಡೌನ್ ನಿಂದಾಗಿ ಶಾಲೆಯಿಲ್ಲದೆ ಮಕ್ಕಳು ಮನೆಯಲ್ಲಿಯೇ ಇದ್ದುದರಿಂದ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈಗ 6ನೇ ತರಗತಿಯಿಂದ ಶಾಲೆಗಳು ಆರಂಭವಾಗಿರುವುದರಿಂದ ಗ್ರಾಮದ ಸುಮಾರು 50 ಮಕ್ಕಳು ಶಾಲೆಗೆ ಹೋಗಿ-ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಲ್ಲಿರುವ ಈ ಗ್ರಾಮದ ಮಕ್ಕಳಿಗೆ ಪಕ್ಕದಲ್ಲಿ ಶಾಲೆ ಇಲ್ಲದಿರುವುದರಿಂದ ಬೆಳ್ಳಟ್ಟಿ ಅಥವಾ ಬಾಳೆಹೊಸೂರಿಗೆ ಹೋಗಬೇಕು. ಅದು 5-6 ಕಿಲೋ ಮೀಟರ್ ದೂರದಲ್ಲಿದೆ. ಹೀಗಿರುವಾಗ ಪೋಷಕರಿಗೆ ಸಹ ತಮ್ಮ ಮಕ್ಕಳ ಬಗ್ಗೆ ಆತಂಕವಾಗುತ್ತಿದೆ.
ಬಸ್ಸುಗಳ ಸಂಚಾರ ಪುನರಾರಂಭಿಸಿ ಎಂದು ಗ್ರಾಮಸ್ಥರ ಬೇಡಿಕೆ: ಮೊದಲಿನಂತೆ ನಿಗದಿತವಾಗಿ ಬಸ್ ಸಂಚಾರ ಸೇವೆ ಆರಂಭಿಸಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಎರಡು ವಾರಗಳ ಹಿಂದೆ ಈಶಾನ್ಯ ಸಾರಿಗೆ ಸಂಚಾರ ನಿಗಮದ ಗಮನಕ್ಕೆ ತಂದಿದ್ದು ಬಸ್ ಸೇವೆ ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಇದುವರೆಗೆ ಆರಂಭವಾಗಿಲ್ಲ. ಹೀಗಾಗಿ ಇನ್ನೆರಡು ಮೂರು ದಿನಗಳಲ್ಲಿ ಪ್ರತಿಭಟನೆ ಆರಂಭಿಸುತ್ತೇವೆ. ಶಿರಹಟ್ಟಿ ತಹಶಿಲ್ದಾರ್ ಕಚೇರಿಗೆ ತಿಳಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಬಗ್ಗೆ ಈಶಾನ್ಯ ಸಾರಿಗೆ ಇಲಾಖೆಯ ಶಿರಹಟ್ಟಿ ತಾಲ್ಲೂಕು ಅಧಿಕಾರಿ, ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಕೋವಿಡ್ ಕಡಿಮೆಯಾದ ತಕ್ಷಣ ಸೇವೆ ಆರಂಭಿಸುತ್ತೇವೆ ಎನ್ನುತ್ತಾರೆ.
Advertisement