ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಪತ್ನಿ ವಿರುದ್ಧ ಸಂಪಾದಕ ಶಂಕರ್ ಆರೋಪ

ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತ ಪತ್ನಿ ಭಾರತಿ ವಿರುದ್ಧ ವಾರಪತ್ರಿಕೆವೊಂದರ ಸಂಪಾದಕ ಹಲ್ಲೆಗೆರೆ ಶಂಕರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತ ಪತ್ನಿ ಭಾರತಿ ವಿರುದ್ಧ ವಾರಪತ್ರಿಕೆವೊಂದರ ಸಂಪಾದಕ ಹಲ್ಲೆಗೆರೆ ಶಂಕರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿರುವ ಶಂಕರ್ ಅವರು, 2020 ಫೆಬ್ರವರಿಯಲ್ಲಿ ಆಂಧ್ರದ ಗೋರ್ಲಾಂಟದ ಶ್ರೀಕಾಂತ್ ಎಂಬುವರ ಜತೆ ಸಿಂಧುರಾಣಿ ವಿವಾಹವಾಗಿತ್ತು. ಶ್ರೀಕಾಂತ್ ತನ್ನ ತಂದೆ-ತಾಯಿ ಜತೆ ಹಾಗೂ ಪತ್ನಿಯ ಜತೆ ಕಾಡುಗೋಡಿಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಸೀಮಂತಕ್ಕೆ ಬಂದ ಮಗಳು ಹೆರಿಗೆಯಾದರೂ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ. ಇನ್ನು 2015ರಲ್ಲಿ ಸಿಂಚನಾ, ಪ್ರವೀಣ್ ಎಂಬಾತನ ಜತೆ ವಿವಾಹವಾಗಿದ್ದರು. ಇವರು ಜಕ್ಕೂರ್‍ನಲ್ಲಿ ತಮ್ಮ ಕುಟುಂಬಸ್ಥರ ಜತೆ ನೆಲೆಸಿದ್ದರು. ಸಿಂಚನಾ ಕೂಡ ಮಗುವಿನ ಹೆರಿಗೆಗೆ ತವರು ಮನೆಗೆ ಬಂದು ಗಂಡನ ಮನೆಗೆ ಹೋಗಿರಲಿಲ್ಲ. ಇಬ್ಬರ ಹೆಣ್ಣುಮಕ್ಕಳ ಜೀವನ ಒಂದೇ ರೀತಿಯಾಗಲು ತಾಯಿ ಭಾರತಿ ಕಾರಣ ಎಂದು ಆರೋಪಿಸಿದ್ದಾರೆ. 

ಸಿಂಧುರಾಣಿ ಹಾಗೂ ಶ್ರೀಕಾಂತ್ ದಂಪತಿಯ ಒಂಬತ್ತು ತಿಂಗಳ ಮಗುವಿಗೆ ನಾಮಕರಣ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಶಾಸ್ತ್ರದಂತೆ ಮಗುವಿಗೆ ಕಿವಿ ಚುಚ್ಚಿಸುವ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಶ್ರೀಕಾಂತ್ ಕುಟುಂಬ ಮಗುವಿಗೆ ಕಿವಿ ಚುಚ್ಚಿಸಬಾರದೆಂದು ತಕರಾರು ತೆಗೆದಿದ್ದರು. ಆದರೆ, ಶಂಕರ್ ಕುಟುಂಬ ಕಿವಿ ಚುಚ್ಚಿಸಬೇಕು ಎಂಬ ಹಠಕ್ಕೆ ಬಿದ್ದಿತ್ತು. ಈ ವೇಳೆ ಸಿಂಧುರಾಣಿಗೆ ಕರೆ ಮಾಡಿದ ಶ್ರೀಕಾಂತ್ ಮೊಬೈಲ್‍ನಲ್ಲಿ ತನ್ನ ಪತ್ನಿಗೆ ಬೈದಿದ್ದರು. ನಂತರ ಮಗಳಿಗೆ ಬುದ್ಧಿವಾದ ಹೇಳಿದ್ದೆ. ಇದರಿಂದ ಮನನೊಂದ ಸಿಂಧುರಾಣಿ 25-30 ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಪೊಲೀಸರು ಸಿಂಧುರಾಣಿ ಹೇಳಿಕೆ ಪಡೆದಾಗ ನನ್ನ ಹಾಗೂ ಅಳಿಯನ ವಿರುದ್ಧ ದೂರು ನೀಡಿದ್ದಳು. ಬಳಿಕ ಪೊಲೀಸರ ಬಳಿಯೇ ಕ್ಷಮಾಪಣಾ ಪತ್ರ ಬರೆದುಕೊಡುವಂತೆಯೂ ಮಾಡಿದ್ದರು. 

ಹೆಣ್ಣುಮಕ್ಕಳಿಗೆ ಗಂಡನೊಂದಿಗೆ ಹೊಂದಿಕೊಂಡು ಸುಂದರವಾಗಿ ಸಂಸಾರ ಮಾಡುವಂತೆ ಬುದ್ಧಿವಾದ ಹೇಳುತ್ತಿದ್ದೆ. ಇದಕ್ಕೆ ಪತ್ನಿ ಭಾರತಿ ಜಗಳವಾಡುತ್ತಿದ್ದರು ಎಂದಿರುವ ಅವರು, ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು.

ಕೌಟುಬಿಂಕ ಕಲಹದಿಂದ ಬೇಸತ್ತು ಪತ್ನಿ ಮತ್ತು ಮಕ್ಕಳಿಗೆ ಬೆಂಗಳೂರಿನಲ್ಲಿ ಆಸ್ತಿ-ಪಾಸ್ತಿಯನ್ನು ಸುಪರ್ದಿಗೆಕೊಟ್ಟು ಆಶ್ರಮ ಕಟ್ಟಿ ಪ್ರತ್ಯೇಕವಾಗಿ ನೆಲೆಸಲು ನಿರ್ಧರಿಸಿದ್ದೆ. ಅಲ್ಲದೆ, ಆಶ್ರಮ ಸ್ಥಾಪನೆ ಸಂಬಂಧ ಮಂಡ್ಯ ತಾಲೂಕಿನ ಚೌಕನಹಳ್ಳಿ ಗ್ರಾಮದಲ್ಲಿ ಜಮೀನು ಖರೀದಿಗೆ ಮುಂದಾಗಿದ್ದೆ. ಮಗನ ಬ್ಯಾಂಕ್ ಖಾತೆಯಲ್ಲಿ ಹಣ ಇತ್ತು. ಹೀಗಾಗಿ ರೂ.10 ಲಕ್ಷ ಕೊಡುವಂತೆ ಕೇಳಿದ್ದಕ್ಕೆ ಸೆ.12 ರಂದು ಭಾನುವಾರ ಮಗನ ಜೊತೆ ಜಗಳವಾಯಿತು. ಇದರಿಂದ ಬೇಸತ್ತು ನತಾನು ಬಟ್ಟೆಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದು ರಾಜಾಜಿನಗರದಲ್ಲಿರುವ ನನ್ನ ಪತ್ರಿಕಾ ಕಚೇರಿಯಲ್ಲಿದ್ದೆ. ನನ್ನ ಮಗನ ಹೆಸರಿನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಕೂಡ ಸಿದ್ಧತೆ ನಡೆಸಿದ್ದೆ. ಇದಕ್ಕಾಗಿ ಕಟ್ಟಡದ ಮಾಲೀಕರಿಗೆ 5 ವರ್ಷಕ್ಕೆ ರೂ.20 ಲಕ್ಷವನ್ನು ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಆದರೆ, ಹಣಕಾಸು ವಿಚಾರವಾಗಿ ಮಗ ತಗಾದೆ ಮಾಡಿದ ಪರಿಣಾಮ ಆ.9 ರಂದು ರಿಸ್ಟ್ರಾರ್ ಕಚೇರಿಯಲ್ಲಿ ಜಗಳವಾಗಿತ್ತು ಎಂದು ಶಂಕರ್ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶನಿವಾರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಮಧು ಸಾಗರ್ ಅವರ ಡೈರಿ ಪುಸ್ತಕವನ್ನು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com