ಅಧಿಕಾರಿಗಳ ಆತುರದ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ: ನಂಜನಗೂಡು ದೇವಾಲಯ ಧ್ವಂಸ ಕುರಿತು ಸಿಎಂ ಬೊಮ್ಮಾಯಿ

ಅಧಿಕಾರಿಗಳ ಆತುರತ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on: 

ದಾವಣಗೆರೆ: ಅಧಿಕಾರಿಗಳ ಆತುರತ ನಿರ್ಧಾರ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮೈಸೂರಿನಲ್ಲಿ ನಡೆದ ದೇವಸ್ಥಾನ ತೆರವು ವಿಚಾರ ಕುರಿತು ಮಾತನಾಡಿದರು. 

ಮೈಸೂರಿನಲ್ಲಿ ನಡೆದ ದೇಗುಲಗಳ ತೆರವು ಅಚಾತುರ್ಯ ಘಟನೆ. ಶಾಂತಿ ಕದಡುವ ವಿಚಾರಗಳಿಗೆ ಪೂರ್ಣ ವಿರಾಮ ಹಾಡುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜನರು ಮೆಚ್ಚುವ ರೀತಿ ಆಡಳಿತ ನೀಡುತ್ತೇವೆ. ಯಾರಿಗೂ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಮೈಸೂರಿನಲ್ಲಿ ದೇಗುಲ ತೆರವು ಮಾಡಿದ್ದು ಭಕ್ತರಲ್ಲಿ ಘಾಸಿ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು. ಇಂಥ ಅಚಾತುರ್ಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇಂತಹ ಅಚಾತುರ್ಯ ಮತ್ತೆ ಆಗಬಾರದು ಎಂದು ಅಧಿಕಾರಿಗಳಿಗೂ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗ ನೊಂದುಕೊಂಡಿರುವ ಹಾಗೂ ಬೇಸರದಲ್ಲಿ ಇರುವವರಿಗೆ ಸಮಾಧಾನ ತರುವ ರೀತಿಯ ನಿರ್ಧಾರ ಮಾಡಲಾಗುತ್ತದೆ. ಈ ಘಟನೆ ಬಗ್ಗೆ ಈಗಾಗಲೇ ಕಾನೂನು ಪಂಡಿತರು, ಪಕ್ಷದ ಹಿರಿಯರು, ಸಂಘದ ಮುಖಂಡರ ಜೊತೆ ಸಮಾಲೋಚನೆ ಮಾಡಿದ್ದೇನೆ. ಯಾರೂ ಆತಂಕಪಡಬೇಕಿಲ್ಲ.‌ ಕಾನೂನಾತ್ಮಕವಾಗಿಯೂ ರಕ್ಷಣೆ ನೀಡುತ್ತೇವೆ. ಮತ್ತೆ ಈ ರೀತಿ ಆಗುವುದಿಲ್ಲ, ನಿಮ್ಮೆಲ್ಲರಿಗೂ ಒಪ್ಪಿಗೆ ಆಗುವ ರೀತಿಯಲ್ಲೇ ಎಲ್ಲವೂ ಇರಲಿದೆ. 

ನಿಮ್ಮ ಸಹಕಾರ ಇರಲಿ, ಸಹನೆಯಿಂದ ಇರಿ. ನಿಮ್ಮ ಮನಸ್ಸಿಗೆ ಮುಟ್ಟುವ ಹಾಗೆ ಕೆಲಸ ಮಾಡುತ್ತೇವೆ. ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ, ವಿಧಾನ ಪರಿಷತ್, ಬಿಬಿಎಂಪಿ ಹಾಗೂ ಎರಡು ಉಪಚುನಾವಣೆಗಳಲ್ಲಿ ಗೆಲ್ಲಲು ರಣತಂತ್ರ ರೂಪಿಸಲಾಗುವುದು. ಈಗಾಗಲೇ ಈ ಬಗ್ಗೆ ಯಾವ ರೀತಿ ನಡೆಯಬೇಕೆಂಬ ಬಗ್ಗೆ ಸಮಾಲೋಚನೆ, ಚರ್ಚೆ ಮಾಡಲಾಗುತ್ತಿದೆ ಎಂದಿದ್ದಾರೆ. 

ಸೊಸೈಟಿ ಇರಲಿ, ಲೋಕಸಭೆ ಇರಲಿ ಎಲ್ಲಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಪಟ್ಟ ಪಡೆಯುವುದು ಖಚಿತ. ಬಿಬಿಎಂಪಿಯಲ್ಲೂ ನಾವೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಖಚಿತ. ದೊಡ್ಡಬಳ್ಳಾಪುರದಲ್ಲೂ ಅಧಿಕಾರಕ್ಕೆ ಬರುತ್ತೇವೆ ಎಂದು  ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ವೀಕ್ ಆಗಿದೆ. ಮಹಾತ್ಮಾ ಗಾಂಧೀಜಿ ಸಿದ್ದಾಂತವೇ ಬೇರೆ. ಆ ನಂತರ ಅಧಿಕಾರಕ್ಕೆ ಬಂದ ಗಾಂಧಿ ತತ್ವ, ಸಿದ್ಧಾಂತವೇ ಬೇರೆ ಬೇರೆ. ಇದು ತದ್ವಿರುದ್ಧವಾದ ರೀತಿಯಲ್ಲಿ ಕಾಂಗ್ರೆಸ್ ಬಳಸಿಕೊಂಡಿದೆ. 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಜನರ ಪರ ಕೆಲಸ ಮಾಡಿದ್ದೇ ಕಡಿಮೆ. ಕಾಂಗ್ರೆಸ್ಸೇತರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಕಿರುಕುಳ ಕೊಟ್ಟಿದೆ. ಪ್ರಾದೇಶಿಕವಾಗಿ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ. ಇದು ಬಿಜೆಪಿಯಲ್ಲಿದೆ. ಹಾಗಾಗಿಯೇ ಇವತ್ತು ಎಷ್ಟೋ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೊಂಡಾಡಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪರ ದಣಿವರಿಯದ ಶ್ರಮ ಕಾರಣ.‌ ಎರಡು ಬಾರಿ ಅಧಿಕಾರಕ್ಕೆ ಬರುವುದು ಅಷ್ಟು ಸುಲಭ ಅಲ್ಲ. ಜನರ ಸಮಸ್ಯೆ ತಿಳಿದು ಪರಿಹರಿಸುವ ಕೆಲಸ ಮಾಡಿದ್ದರ ಪರಿಣಾಮ ನಾವು ಅಧಿಕಾರದಲ್ಲಿದ್ದೇವೆ. ಒಬ್ಬರೇ ಇದ್ದಾಗಲೂ, ನಾಲ್ಕು ನೂರು ಜನರು ಇದ್ದಾಗಲೂ ಯಡಿಯೂರಪ್ಪ ಅವರು ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪರ ಉತ್ತಮ ಆಡಳಿತದ ಪರಿಣಾಮ ಹಳ್ಳಿ ಹಳ್ಳಿಗಳಲ್ಲೂ ಯುವಕರು ಹಾಗೂ ರೈತರು ಬಿಜೆಪಿಯ ಪರ ಇದ್ದಾರೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com