ಯುಬಿ ಸಿಟಿ ಸ್ಕೈ ಬಾರ್ ಹಲ್ಲೆ ಪ್ರಕರಣ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಖುಲಾಸೆ
ಕಳೆದ 7 ವರ್ಷಗಳ ಹಿಂದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಗರದ ಯುಬಿ ಸಿಟಿಯಲ್ಲಿರುವ ಸ್ಕೈಬಾರ್ ನಲ್ಲಿ ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಆಪ್ತ ಸೋಮಶೇಖರ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.
Published: 16th April 2021 09:26 AM | Last Updated: 16th April 2021 12:56 PM | A+A A-

ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ್
ಬೆಂಗಳೂರು: ಕಳೆದ 7 ವರ್ಷಗಳ ಹಿಂದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಗರದ ಯುಬಿ ಸಿಟಿಯಲ್ಲಿರುವ ಸ್ಕೈಬಾರ್ ನಲ್ಲಿ ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಆಪ್ತ ಸೋಮಶೇಖರ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.
ಬೆಂಗಳೂರು ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ತ್ಯಾಗರಾಜ್ ಎನ್.ಇನವಳ್ಳಿ ತೀರ್ಪು ನೀಡಿದ್ದಾರೆ.
2014 ರ ಜುಲೈ 1ರ ರಾತ್ರಿ ನಡೆದಿದ್ದ ಪ್ರಕರಣವೊಂದು ಇಡೀ ರಾಜ್ಯದ ಗಮನ ಸೆಳೆದಿತ್ತು. ಯುಬಿ ಸಿಟಿ ಸ್ಕೈ ಬಾರ್'ನಲ್ಲಿ ಹುಟ್ಟುಹಬ್ಬ ಆಚರಣೆ ಆಯೋಜಿಸಲಾಗಿತ್ತು. ರಾತ್ರಿ 11.30ರವರೆಗೆ ಮಾತ್ರ ಬಾರ್ ತೆರೆಯಲು ಕಾನೂನಿನಲ್ಲಿ ಅನುಮತಿ ಇದೆ. ಸಮಯ ಮೀರಿದ ಬಳಿಕವೂ ಮದ್ಯ ಪೂರೈಸುವಂತೆ ಪಾರ್ಟಿಯಲ್ಲಿ ಮೈ ಮರೆದ್ದವರು ಬಾರ್ ಸಿಬ್ಬಂದಿಯನ್ನು ಒತ್ತಾಯಿಸಿದ್ದರು.
ಇದಕ್ಕೆ ಒಪ್ಪದಿದ್ದಾಗ ರಾದ್ಧಾಂತ ನಡೆದಿತ್ತು. ಬಾರ್ ನಲ್ಲಿ ಗಲಾಟೆ ನಡೆಸುತ್ತಿರುವುದನ್ನು ಅನಾಮಧೇಯ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಾದ ಕಿರಣ್ ಕುಮಾರ್ ಹಾಗೂ ಪ್ರಶಾಂತ್ ನಾಯಕ್ ಅವರು ಆಗ ಶಾಸಕರಾಗಿದ್ದ ಕಾಶಪ್ಪನವರ್ ಮತ್ತವರ ಬೆಂಬಲಿಗರಿಗೆ ತಿಳಿ ಹೇಳಿದರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ.
ಇದನ್ನರಿತ ಪೊಲೀಸರು ಅಲ್ಲಿನ ಘಟನೆಯನ್ನು ಚಿತ್ರೀಕರಿಸಲು ಆರಂಭಿಸಿದ್ದರು. ಬಳಿಕ ಕಾಶಪ್ಪನವರ್ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಚಿತ್ರೀಕರಣ ನಡೆಸಿದ್ದ ಮೊಬೈಲ್ ಕಿತ್ತುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಳಾದ ನಂತರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನಂತರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.