ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಹೇಳಿಕೆ ವಿರುದ್ಧ ಯಾವುದೇ ಆದೇಶವನ್ನು ಕೃಷಿ ಇಲಾಖೆ ಹೊರಡಿಸಿಲ್ಲ: ಬಿ.ಸಿ.ಪಾಟೀಲ್
ಕೇಂದ್ರದ ಸೂಚನೆಯ ವಿರುದ್ಧ ರಾಜ್ಯ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Published: 18th April 2021 11:52 AM | Last Updated: 18th April 2021 11:52 AM | A+A A-

ಬಿಸಿ ಪಾಟೀಲ್
ಬೆಂಗಳೂರು: ಕೇಂದ್ರದ ಸೂಚನೆಯ ವಿರುದ್ಧ ರಾಜ್ಯ ಕೃಷಿ ಇಲಾಖೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಚಿವ ಬಿ.ಸಿ.ಪಾಟೀಲ್, 'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿರುವ ಹಳೆಯ ದಾಸ್ತಾನಿನ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಸೂಚನೆಗೆ ತದ್ವಿರುದ್ಧವಾಗಿ ರಾಜ್ಯ ಕೃಷಿ ಇಲಾಖೆ ಆದೇಶ ಹೊರಡಿಸಿದೆ ಎಂಬುದು ಶುದ್ಧ ಸುಳ್ಳಾಗಿದ್ದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರ ಹೇಳಿಕೆ ವಿರುದ್ಧ ಯಾವುದೇ ಆದೇಶ ರಾಜ್ಯ ಕೃಷಿ ಇಲಾಖೆ ಹೊರಡಿಸಿಲ್ಲ ಎಂದು ಹೇಳಿದ್ದಾರೆ.
'ಹಳೆಯ ರಸಗೊಬ್ಬರ ದಾಸ್ತಾನನ್ನು ಹಳೆಯ ದರದಲ್ಲೇ ಮಾರಾಟ ಮಾಡಬೇಕೆಂದು ರಸಗೊಬ್ಬರ ಮಾರಾಟಗಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ಸಹ ಮಾಡಲಾಗುತ್ತಿದೆ.ಆದರೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ರಾಜ್ಯದ ರೈತರ ದಿಕ್ಕುತಪ್ಪಿಸುತ್ತಿದ್ದಾರೆ' ಎಂದು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.
'ಮುಂಗಾರು ಹಂಗಾಮಿನ (ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ) ಕಾಂಪ್ಲೆಕ್ಸ್ (NPK fertilizer) ರಸಗೊಬ್ಬರಗಳ ಒಟ್ಟು ಬೇಡಿಕೆ 10.03 ಲಕ್ಷ ಮೆ.ಟನ್ ಇದ್ದು ಏಪ್ರಿಲ್ ತಿಂಗಳ ಬೇಡಿಕೆ 1.68 ಲಕ್ಷ ಮೆ.ಟನ್ ಇರುತ್ತದೆ. ಈಗಾಗಲೇ 5.19 ಲಕ್ಷ ಮೆ.ಟನ್ ದಾಸ್ತಾನಿರುತ್ತದೆ. ರಸಗೊಬ್ಬರ ಮಾರಾಟಗಾರರು ಯಾವುದೇ ಕಾರಣಕ್ಕೂ ದಾಸ್ತಾನು ಇರುವ ಹಳೆಯ ರಸಗೊಬ್ಬರವನ್ನು ಹೊಸ ದರದಲ್ಲಿ ವಿತರಿಸದೇ ಹಳೆಯ ದಾಸ್ತಾನನ್ನು ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.