ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಕ್ಕೆ ಕೇಂದ್ರದ ಅನುಮತಿ ಕೋರಿದ ನಿರಾಣಿ

ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೆ  ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್ ಶಿಪ್ ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ...
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ನವದೆಹಲಿ/ಬೆಂಗಳೂರು: ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೆ  ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್ ಶಿಪ್ ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿ, ಕೆಜಿಎಪ್ ನಲ್ಲಿ ಟೌನ್ ಶಿಪ್ ನಿರ್ಮಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಕೆಜಿಎಪ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಗೆ ಬರುವ ಸುಮಾರು 3212 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದು, ಇಲ್ಲಿ ಗಣಿಗಾರಿಕೆ ನಡೆಸಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಟೌನ್ ಶಿಪ್ ನಿರ್ಮಾಣವಾದರೆ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೆಜಿಎಪ್ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದೆ.

ಅಲ್ಲದೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುವುದರಿಂದ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದೆ. ಟೌನ್ ಶಿಪ್ ನಿರ್ಮಾಣ ಮಾಡಲು ಯೋಗ್ಯವಾಗಿರುವುದರಿಂದ ತಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.

ಭಾರತೀಯ ಪರಂಪರೆಯಲ್ಲಿ ಚಿನ್ನಕ್ಕೆ ಅಗ್ರಸ್ಥಾನ. ದೇಶದಲ್ಲಿ ಚಿನ್ನದ ಉತ್ಪಾದನೆ ಪ್ರಮಾಣ ಕಡಿಮೆಯಿರುವುದರಿಂದ ವಿದೇಶಗಳಿಂದ ಪ್ರತಿವರ್ಷ 30 ಬಿಲಿಯ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.ಗೂ ಹೆಚ್ಚು) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ದೇಶೀಯವಾಗಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕ 2 ರಿಂದ 3 ಟನ್ ಚಿನ್ನ ಉತ್ಪಾದಿಸಲಾಗುತ್ತಿದೆ. 19 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್)ಗಳಲ್ಲಿ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಲು ಕೇಂದ್ರ ಅನುಮತಿ ನೀಡಿದೆ  ಎಂದು ತಿಳಿಸಿದರು.

ಈ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಲಿದ್ದಲು ಸಚಿವ  ಪ್ರಹ್ಲಾದ್ ಜೋಷಿ ಅವರು ಸದ್ಯದಲ್ಲಿಯೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗುವುದು. ಕೆಜಿಎಫ್ ನಲ್ಲಿ ಕೈಗಾರಿಕಾ ಟೌನ್ ಶಿಪ್ ಸ್ಥಾಪನೆ ಮಾಡಲು ಕೇಂದ್ರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com