
ಅಪಘಾತ
ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಈ ಘಟನೆ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹುನಶ್ಯಾಲ್ ಗ್ರಾಮದಲ್ಲಿ ಕಾರ್ ವೊಂದು ಗೋಕಾಕ್ ಕಡೆ ತೆರಳುತ್ತಿದ್ದ ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದು ಈ ಅವಘಡ ಸಂಭವಿಸಿದೆ. ಅತಿ ವೇಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರೊಂದು 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಜನ ಮೃತಪಟ್ಟ ದುರ್ಘಟನೆ ನಡೆದಿದೆ.
ಗೋಕಾಕದಿಂದ ಹುಣಶ್ಯಾಳದ ಕಡೆ ಹೊರಟಿದ್ದ, ಎರಡು ಬೈಕ್ ಗಳಿಗೆ ಎದುರಿಗೆ ಮೂಡಲಗಿಯಿಂದ ಗೋಕಾಕ ಕಡೆ ಬರುತ್ತಿದ್ದ ಸ್ವೀಪ್ಟ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಮೂವರು ದುರ್ಮರಣಕ್ಕಿಡಾಗಿದ್ದಾರೆ.
ಮೃತ ದುರ್ದೈವಿಗಳನ್ನು ಹುಣಶ್ಯಾಳದ ನಾಗಪ್ಪ ಮಗ್ಯಾಪ್ಪಗೋಳ, ಗೋಪಾಲ ಮತ್ನಾಳ ಎಂದು ಗುರುತಿಸಲಾಗಿದ್ದು, ಓರ್ವ ಮಹಿಳೆ ಕೂಡ ಮೃತರಾಗಿದ್ದಾರೆ. ಇವರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಸ್ವಿಫ್ಟ್ ಕಾರಿನ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಘಟನೆ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟಪ್ರಭಾ ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.