ವಿಧಾನ ಪರಿಷತ್ ಸಭಾಪತಿಯಾಗಿ 6 ತಿಂಗಳಾಯ್ತು... ಬಸವರಾಜ ಹೊರಟ್ಟಿಗೆ ಇನ್ನೂ ಸಿಕ್ಕಿಲ್ಲ ಅಧಿಕೃತ ಸರ್ಕಾರಿ ನಿವಾಸ!

ವಿಧಾನ ಪರಿಷತ್ ಸಭಾಪತಿಯಾಗಿ 6 ತಿಂಗಳು ಕಳೆದರೂ ಬಸವರಾಜ ಹೊರಟ್ಟಿಯವರಿಗೆ ಸರ್ಕಾರದ ಅಧಿಕೃತ ನಿವಾಸ ದೊರೆತಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿದೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿಯಾಗಿ 6 ತಿಂಗಳು ಕಳೆದರೂ ಬಸವರಾಜ ಹೊರಟ್ಟಿಯವರಿಗೆ ಸರ್ಕಾರದ ಅಧಿಕೃತ ನಿವಾಸ ದೊರೆತಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿದೆ.
 
ವಿಧಾನ ಪರಿಷತ್'ನ  ಹಿರಿಯ ಸದಸ್ಯರಾಗಿರುವ ಬಸವರಾಜ ಹೊರಟ್ಟಿಯವರು ಪ್ರಸ್ತುತ ಶಾಸಕರ ಗೃಹದಲ್ಲಿ ಉಳಿದುಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಾನು ಶಾಸಕರ ಗೃಹವನ್ನೇ ಅಧಿಕೃತ ನಿವಾಸವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇನೆ. ಸರ್ಕಾರದಿಂದ ಅಧಿಕೃತ ನಿವಾಸವನ್ನು ನೀಡಿಲ್ಲ. ಈ ಹಿಂದೆ ಇದ್ದ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಡಿ.ಹೆಚ್.ಶಂಕರಮೂರ್ತಿಯವರಿಗೆ ಗಾಂಧಿ ಭವನದ ಹತ್ತಿರ ಸರ್ಕಾರಿ ಮನೆ ನೀಡಲಾಗಿತ್ತು. ಸಭಾಪತಿಯಾಗಿ ನಾನು ಆಯ್ಕೆಯಾಗಿ 6 ತಿಂಗಳುಗಳಾಗಿವೆ. ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದಾನೆ. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಂದಿನ ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳೂ ಪತ್ರ ಬರೆದಿದ್ದೇನೆ. ಆದರೆ, ಏನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ವಿಧಾನಪರಿಷತ್ ಸಭಾಪತಿಯಾಗಿರುವ ನನ್ನನ್ನು ಭೇಟಿಯಾಗಲು ಸಾಕಷ್ಟು ಜನರು ಬರುತ್ತಿರುತ್ತಾರೆ. ಅವರಿಗೆ ಶಾಸಕರ ಗೃಹಕ್ಕೆ ಬರುವಂತೆ ತಿಳಿಸಲು ಸಾಧ್ಯವಿಲ್ಲ. ಇದು ನನಗಷ್ಟೇ ಅಲ್ಲ, ಇತರರಿಗೂ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಾಗಿ ನಾನು ವಿಧಾನಸೌಧದಲ್ಲಿರುವ ನನ್ನ ಕಚೇರಿಗೇ ಬರುವಂತೆ ತಿಳಿಸುತ್ತಿದ್ದೇನೆ. ಈ ನಡುವೆ ವಿಧಾನಸೌಧ ಭೇಟಿಗೆ ನಿರ್ಬಂಧಗಳನ್ನು ವಿಧಿಸಿರುವುದೂ ಇದಕ್ಕೆ ಸಮಸ್ಯೆಗಳನ್ನೊಡ್ಡುತ್ತಿದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಡಿಪಿಎಆರ್ ಮೂಲಗಳು ಮಾಹಿತಿ ನೀಡಿ, ಸರ್ಕಾರದ ಸಾಕಷ್ಟು ಬಂಗಲೆಗಳನ್ನು ಸಚಿವರು ಪಡೆದುಕೊಂಡಿದ್ದಾರೆ. ಇದ್ದಿದ್ದ ಎರಡು ಬಂಗಲೆಗಳನ್ನು ಜಗದೀಶ್ ಶೆಟ್ಟರ್ ಹಾಗೂ ಸಿಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಅವರು ಬಂಗಲೆಗಳನ್ನು ಖಾಲಿ ಮಾಡಬೇಕಿದೆ. ಸಾಮಾನ್ಯವಾಗಿ ಬಂಗಲೆಗಳ ಖಾಲಿ ಮಾಡಲು ನಾಯಕರಿಗೆ 2 ತಿಂಗಳು ಕಾಲಾವಕಾಶ ನೀಡಲಾಗುತ್ತಿದೆ. ಹೊರಟ್ಟಿಯವರಿಗೆ ನೀಡಬೇಕಿರುವ ಸರ್ಕಾರಿ ಮನೆ ಕುರಿತ ಕಡತ ಮುಖ್ಯಮಂತ್ರಿಗಳ ಬಳಿ ಇದೆ. ಇದೀಗ ಅವರೇ ಈ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದೆ. 

ಬೆಂಗಳೂರಿನಲ್ಲಿ ಒಟ್ಟು 23 ಸರ್ಕಾರಿ ಬಂಗಲೆಗಳಿದ್ದು, ಅವುಗಳನ್ನು ಮುಖ್ಯಮಂತ್ರಿಗಳ ಸಚಿವ ಸಂಪುಟದ ಸಚಿವರು, ವಿರೋಧ ಪಕ್ಷದ ನಾಯಕರು, ನ್ಯಾಮೂರ್ತಿಗಳು ಹಾಗೂ ಸರ್ಕಾರ ಉನ್ನತಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ರೇಸ್ ಕೋರ್ಸ್ ರಸ್ತೆಯಲ್ಲಿ ಅಧಿಕೃತ ನಿವಾಸವೊಂದನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ. 

ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಗದಿತ ನಿವಾಸಗಳಿಲ್ಲ. ಆದರೂ ಕೆಲ ವರ್ಷಗಳಿಂದ ಕಾವೇರಿ, ಅನುಗ್ರಹ ಅಥವಾ ಇತರೆ ಬಂಗಲೆಗಳಲ್ಲಿ ವಾಸವಿರುತ್ತಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿಯನ್ನೇ ತಮ್ಮ ಅಧಿಕೃತ ನಿವಾಸವಾಗಿ ಬಳಕೆ ಮಾಡುತ್ತಿದ್ದರು. ನಗರದಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರಿಗೆ ಮನೆಗಳ ಕೊರತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com