2008ರಲ್ಲಿದ್ದ ಮಾರುಕಟ್ಟೆ ದರದಲ್ಲಿ ಮಾಜಿ ಕ್ರಿಕೆಟರ್'ಗೆ ನಿವೇಶನ ಮಂಜೂರು ಮಾಡಿ: ಬಿಡಿಎಗೆ ಹೈಕೋರ್ಟ್ ಆದೇಶ

2008ರಲ್ಲಿದ್ದ ಮಾರುಕಟ್ಟೆ ದರದಲ್ಲಿ ಮಾಜಿ ಕ್ರಿಕೆಟ್ ಆಟಗಾರ್ತಿ ಸ್ಮಿತಾ ಹರಿಕೃಷ್ಣ ಅವರಿಗೆ ನಿವೇಶನ ಮಂಜೂರು ಮಾಡುವಂತೆ ಬಿಡಿಎಗೆ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2008ರಲ್ಲಿದ್ದ ಮಾರುಕಟ್ಟೆ ದರದಲ್ಲಿ ಮಾಜಿ ಕ್ರಿಕೆಟ್ ಆಟಗಾರ್ತಿ ಸ್ಮಿತಾ ಹರಿಕೃಷ್ಣ ಅವರಿಗೆ ನಿವೇಶನ ಮಂಜೂರು ಮಾಡುವಂತೆ ಬಿಡಿಎಗೆ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. 

ಮಾಜಿ ಕ್ರಿಕೆಟ್ ಆಟಗಾರ್ತಿ ಸ್ಮಿತಾ ಹರಿಕೃಷ್ಣ ಅವರಿಗೆ ನಿವೇಶನ ಮಂಜೂರು ಮಾಡುವಂತೆ ಹೈಕೋರ್ಟ್ ಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. 

ಈ ಮೇಲ್ಮನವಿಯನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾ.ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿ, ಈ ಆದೇಶವನ್ನು ನೀಡಿದೆ. 

ಸ್ಮಿತಾ ಹರಿಕೃಷ್ಣ ಎರಡು ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು. ಅವರ ಸೇವೆ ಪರಿಗಣಿಸಿ ನಿವೇಶನ ಮಂಜೂರು ಮಾಡಲು ಬಿಡಿಎ 2008ರಲ್ಲಿ ನಿರ್ಣಯ ಕೈಗೊಂಡಿತ್ತು. ಅದರಂತೆ ಸ್ಮಿತಾ ಹರಿಕೃಷ್ಣ 2008 ರಿಂದ ಮೂರು ಬಾರಿ ಬಿಡಿಎಗೆ ಮನವಿ ಸಲ್ಲಿಸಿದ್ದರು. 2020ರ ಜು.3ರಂದು ಮಂಜೂರಾತಿ ಪತ್ರವನ್ನು ವಿತರಿಸಿದ್ದ ಬಿಡಿಎ 77,22 ಲಕ್ಷ ರೂ. ಪಾವತಿಸುವಂತೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಸ್ಮಿತಾ ಹರಿಕೃಷ್ಣ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ, ಬಿಡಿಎ ಮಂಜೂರಾತಿ ಪತ್ರ ರದ್ದುಪಡಿಸಿ, 2008ರಲ್ಲಿ ಇದ್ದ ಮಾರುಕಟ್ಟೆ ದರ ಸ್ವೀಕರಿಸಿ ನಿವೇಶನ ಮಂಜೂರು ಮಾಡುವಂತೆ ಆದೇಶಿಸಿತ್ತು. ಆದೇಶ ಪ್ರಶ್ನಿಸಿ ಬಿಡಿಎ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಪೀಠ  ಬಿಡಿಎ ನಿರ್ಣಯ 208ರಲ್ಲಿ ನಿವೇಶನ ಮಂಜೂರಾತಿಗೆ ನಿರ್ಣಯ ಕೈಗೊಂಡಿದ್ದರೂ, 2020ರಲ್ಲಿ ಅದರ ಜಾರಿಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಬಿಡಿಎ ಪರ ವಕೀಲರು ಉತ್ತರಿಸಿ, ಕಡತವು ಕಾಣೆಯಾಗಿತ್ತು ಎಂದರು. ಇದಕ್ಕೆ ಮತ್ತಷ್ಟು ಗರಂ ಆದ ಪೀಠ, ಕಡತ ಕಾಣೆಯಾಗಿತ್ತು ಎಂಬ ಕುಂಟು ನೆಪ ಹೇಳುವುದು ಆಘಾತಕಾರಿ. ಬಿಡಿಎ ಅಧಿಕಾರಿಗಳ ತಪ್ಪಿಗೆ, ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿಯೊಬ್ಬರಿಗೆ ಮಂಜೂರು ಮಾಡಬೇಕಾದ ನಿವೇಶನಕ್ಕೆ ಭಾರಿ ಮೊತ್ತ ವಿಧಿಸಿರುವುದು ಸರಿಯಲ್ಲ ಎಂದಿತು. 

ಅಲ್ಲದೆ, ಏಕ ಸದಸ್ಯ ಪೀಠದ ಆದೇಶದಂತೆ ಸ್ಮಿತಾ ಹರಿಕೃಷ್ಣ ಅವರಿಗೆ 2008ರಲ್ಲಿದ್ದ ಮಾರುಕಟ್ಟೆ ದರದಲ್ಲಿ ನಿವೇಶನ ಮಂಜೂರು ಮಾಡಬೇಕು ಎಂದು ಆದೇಶಿಸಿ, ಬಿಡಿಎ ಮೇಲ್ಮನವಿಯನ್ನು ವಜಾಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com