ಇಸ್ರೋ ಯೋಜನೆ ಸ್ಥಳಾಂತರಕ್ಕೆ ವಿರೋಧ: ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ನಗರದಲ್ಲಿರುವ ಇಸ್ರೋ ಕಛೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಎನ್‍ಎಸ್‍ಯುಐ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಸಂಜಯನಗರದಲ್ಲಿರುವ ಇಸ್ರೋ ಕೇಂದ್ರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಇಸ್ರೋ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
ಇಸ್ರೋ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ನಗರದಲ್ಲಿರುವ ಇಸ್ರೋ ಕಛೇರಿಯನ್ನು ಗುಜಾರಾತ್ ರಾಜ್ಯಕ್ಕೆ ವರ್ಗಾಹಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಎನ್‍ಎಸ್‍ಯುಐ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಸಂಜಯನಗರದಲ್ಲಿರುವ ಇಸ್ರೋ ಕೇಂದ್ರ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಹಿರಿಯರು ಕಟ್ಟಿ ಬೆಳಸಿದ ಹಲವಾರು ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿದೆ. ಬೆಂಗಳೂರಿನ ಹವಮಾನ, ಉತ್ತಮ ಪರಿಸರದ ಕಾರಣದಿಂದ ಇಸ್ರೋ ಸಂಸ್ಥೆ ಸ್ಥಾಪಿಸಲಾಯಿತು. ಸುಮಾರು 15 ಸಾವಿರ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದ ಕೇಂದ್ರವಷ್ಟೇ ಅಲ್ಲ. ತಾಂತ್ರಿಕ ಅನ್ವೇಷಣೆಗಳ ಹಬ್ ಕೂಡ ಆಗಿದೆ ಎಂದರು.

ಇಸ್ರೋದಲ್ಲಿ ಮಾನವ ಸಹಿತ ವೈಮಾನಿಕ ಯಾನಕ್ಕೆ 2007ರಿಂದಲೂ ಸಂಶೋಧನಾ ಯೋಜನೆ ನಡೆಯುತ್ತಿದೆ. ಇದನ್ನು ಗುಜರಾತ್‍ಗೆ ಸ್ಥಳಾಂತರಿಸಲು ಪ್ರಯತ್ನಗಳು ನಡೆದಿವೆ. ಅದರ ಭಾಗವಾಗಿ ಅಂತಿಮ ಹಂತದಲ್ಲಿರುವ ಯೋಜನೆಯ ಕಾರ್ಯಕ್ರಮಗಳಿಗೆ ತಡೆ ನೀಡಲಾಗಿದೆ ಎಂದು ಆರೋಪಿಸಿದರು.

ಇಸ್ರೋ ಸಂಸ್ಥೆಯ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಇದು ನಾಡಿನ ಸ್ವಾಭಿಮಾನದ ಪ್ರಶ್ನೆ. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ನಾವಿಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸದೆ ಇದ್ದರೆ ಕನ್ನಡ ಪರ ಸಂಘಟನೆಗಳು ಪಕ್ಷಾತೀತವಾಗಿ ಎಲ್ಲರೂ ಪ್ರತಿಭಟನೆ ನಡೆಸುತ್ತಾರೆ.

ನಮ್ಮ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದಾಗ ಅದಕ್ಕೆ ತಡೆ ನೀಡುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಇಂತಹದಕ್ಕೆಲ್ಲಾ ನಾವು ಹೆದರುವುದಿಲ್ಲ. ನಮ್ಮನ್ನು ಬಂಧಿಸಿದರು ಜಗ್ಗುವುದಿಲ್ಲ ಎಂದು ಹೇಳಿದರು.

ಗುಜರಾತ್ ರಾಜ್ಯಕ್ಕೆ ಇಸ್ರೋ ಸಂಸ್ಥೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯದ 25 ಬಿಜೆಪಿ ಲೋಕ ಸಭಾ ಸದಸ್ಯರು, 12 ರಾಜ್ಯ ಸಭಾ ಸದಸ್ಯರು ಪ್ರಧಾನಿರವರ ಬಳಿ ನಿಯೋಗ ತೆರಳಿ ಇಸ್ರೋ ಸಂಸ್ಥೆ ಇಲ್ಲಿಯೇ ಉಳಿಯುವಂತೆ ಮಾಡಬೇಕು. ನರೇಂದ್ರ ಮೋದಿಯೊಂದಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚಿಸಿ ಇಸ್ರೋ ಸಂಸ್ಥೆ ಇಲ್ಲಿ ಉಳಿಯುವಂತೆ ಮನವಿ ಮಾಡಬೇಕು. ಅದಲ್ಲದೆ ವರ್ಗಾವಣೆಯಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಭಾರತದಲ್ಲಿ ಎಲ್ಲಿಯಾದರೂ ಕೆಲಸ ಮಾಡಲು ಸಿದ್ಧ ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದರು. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಕರ್ನಾಟಕದಿಂದ ಯಾವುದೇ ಕಾರಣಕ್ಕೂ ಯೋಜನೆ ಸ್ಥಳಾಂತರವಾಗಬಾರದು. ತಾವು ಮುಖ್ಯಮಂತ್ರಿ ಹಾಗೂ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆದಿದ್ದು, ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಈ ನಿಟ್ಟಿನಲ್ಲಿ ಒತ್ತಡ ಹೇರಬೇಕೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com