ಓಮಿಕ್ರಾನ್: ಸೋಂಕಿತ ವೈದ್ಯನ ಸೋಂಕಿನ ಮೂಲ ಪತ್ತೆಗೆ ಆರೋಗ್ಯ ಇಲಾಖೆ ಮುಂದು!

ಅರವಳಿಕೆ ತಜ್ಞನಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕು ಯಾವ ರೀತಿ ತಗುಲಿತು ಎಂಬುದರ ಮೂಲ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅರವಳಿಕೆ ತಜ್ಞನಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕು ಯಾವ ರೀತಿ ತಗುಲಿತು ಎಂಬುದರ ಮೂಲ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೋಂಕಿನ ಮೂಲ ಪತ್ತೆಗೆ ಈಗಾಗಲೇ ಆರೋಗ್ಯ ಇಲಾಖೆ ಕಾರ್ಯ ಆರಂಭಿಸಿದ್ದು, ವೈದ್ಯನ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯ 163 ಮಂದಿ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಿದೆ ಎಂದು ತಿಳಿದುಬಂದಿದೆ.

ವೈದ್ಯನ ಜೊತೆಗೆ ಐವರು ಪ್ರಾಥಮಿಕ ಸಂಪರ್ಕದಲ್ಲಿರುವುದು ತಿಳಿದುಬಂದಿದ್ದು, ವೈದ್ಯರ ಪತ್ನಿ, ಇಬ್ಬರು ಸಹೋದ್ಯೋಗಿಗಳು ಹಾಗೂ ಇಬ್ಬರು ವೈದ್ಯರು ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಾಗಿದ್ದಾರೆ ಮೂಲಗಳು ತಿಳಿಸಿವೆ.

ವೈದ್ಯನೊಂದಿಗೆ ಸಂಪರ್ಕದಲ್ಲಿದ್ದ ಕೆಲವರಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ವೈದ್ಯನೊಂದಿಗೆ ಸಂಪರ್ಕದಲ್ಲಿದ್ದ 163 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ ರೋಗಿಗಳೂ ಇದ್ದಾರೆ. ಎಲ್ಲರ ವೈದ್ಯಕೀಯ ವರದಿಯೂ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯನಿಗೆ ಸೋಂಕು ತಗುಲಿ 13 ದಿನಗಳಾಗಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಜೊತೆಗೆ ಸಂಪರ್ಕದಲ್ಲಿದ್ದವರ ಮೇಲೂ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೋಂಕು ಪೀಡಿತ ವೈದ್ಯರು ಕಾನ್ಫರೆನ್ಸ್ ವೊಂದರಲ್ಲಿ ಪಾಲ್ಗೊಂಡಿದ್ದು, ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದ ಜನರ ಮೇಲೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನಿಗಾ ಇರಿಸಿದ್ದಾರೆ.

ಕಾನ್ಫರೆನ್ಸ್ ನಲ್ಲಿ 75 ವೈದ್ಯರು, ಐವರು, ಲ್ಯಾಬ್ ಟೆಕ್ನಿಷಿಯನ್ಸ್ ಗಳು, ಇತರೆ ಸಿಬ್ಬಂದಿಗಳು ಇದ್ದು, ಎಲ್ಲರ ಪತ್ತೆ ಕಾರ್ಯ ಆರಂಭವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಂದಲೇ ಸೋಂಕು ತಗುಲಿರಬಹುದು ಎಂದು ಹೇಳಲು ಸಾಧ್ಯವಿಲ್ಲ. ಸೋಂಕು ತಗುಲಿದ ಒಂದೇ ದಿನದಲ್ಲಿ ಲಕ್ಷಣಗಳು ಕಂಡು ಬರುವುದಿಲ್ಲ. ಬೇರೆಡೆಯಿಂದ ವೈದ್ಯನಿಗೆ ಸೋಂಕು ತಗುಲಿರುವ ಸಾಧ್ಯತೆಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com