ದಾರಿ ತಪ್ಪಿ ನಾಡಿಗೆ ಬಂದ ಕಾಡಾನೆಗೆ ಗ್ರಾಮಸ್ಥರಿಂದ ಕಾಟ, ಆಕ್ರೋಶಿತ ಆನೆಯಿಂದ ರಂಪಾಟ, ವಾಹನಗಳು ಛಿದ್ರ!!
ಕಾಡಿನಿಂದ ದಾರಿ ತಪ್ಪಿ ನಾಡಿಗೆ ಆಗಮಿಸಿದ್ದ ಕಾಡಾನೆಯೊಂದನ್ನು ಓಡಿಸುವ ಭರದಲ್ಲಿ ಸ್ಥಳೀಯರು ಆನೆಗೆ ಹಿಂಸೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Published: 07th December 2021 01:59 PM | Last Updated: 07th December 2021 02:00 PM | A+A A-

ಆನೆ ಮೇಲೆ ಸಾರ್ವಜನಿಕರ ದಾಳಿ
ಮೈಸೂರು: ಕಾಡಿನಿಂದ ದಾರಿ ತಪ್ಪಿ ನಾಡಿಗೆ ಆಗಮಿಸಿದ್ದ ಕಾಡಾನೆಯೊಂದನ್ನು ಓಡಿಸುವ ಭರದಲ್ಲಿ ಸ್ಥಳೀಯರು ಆನೆಗೆ ಹಿಂಸೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಹುಣಸೂರು-ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಗುರುಪುರ ಟಿಬೇಟಿಯನ್ ಕ್ಯಾಂಪ್ ರಸ್ತೆಗೆ ನಾಗರಹೊಳೆ ಅರಣ್ಯದಿಂದ ಕಾಡಾನೆ ಬಂದಿದ್ದು, ಹೀಗೆ ಬಂದ ಆನೆಯನ್ನು ಮತ್ತೆ ಕಾಡಿಗೆ ಅಟ್ಟುವ ಭರದಲ್ಲಿ ಸ್ಥಳೀಯರು ಅದಕ್ಕೆ ಹಿಂಸೆ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸಪಟ್ಟಿದ್ದಾರೆ. ಅಸಾಮಿಯೊಬ್ಬ ಆನೆಯತ್ತ ಬೆಂಕಿ ಎಸೆದಿದ್ದಾನೆ. ಸಿಟ್ಟಿಗೆದ್ದ ಆನೆ ಗ್ರಾಮಸ್ಥರತ್ತ ನುಗ್ಗಿದೆ. ರಸ್ತೆಯಲ್ಲಿದ್ದ ವಾಹನ ಸವಾರರನ್ನು ಅಟ್ಟಾಡಿಸಿದೆ. ಅಷ್ಟಕ್ಕೂ ತನ್ನ ಆಕ್ರೋಶ ತಣ್ಣಗಾಗದೇ ವಿದ್ಯುತ್ ಕಂಬವನ್ನು ಗುದ್ದಿ ಕಿತ್ತೆಸೆದಿದೆ.
ಈ ವೇಳೆ ವಿದ್ಯುತ್ ಕಂಬ ಮುರಿದಿದ್ದು, ವಿದ್ಯುತ್ ತಂತಿಗಳಿಂದ ಕಿಡಿಗಳೂ ಎದ್ದಿವೆ. ಅಲ್ಲದೇ ಕಾಡಾನೆ ಜನರ ಮೇಲೂ ದಾಳಿ ಮಾಡಲು ಯತ್ನಿಸಿದ್ದು, ಕೂಡಲೇ ಸಾರ್ವಜನಿಕರು ಅರಣ್ಯ ಇಲಾಖೆಗೆ ಆನೆಯ ರಂಪಾಟವನ್ನು ತಿಳಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜನರ ವರ್ತನೆಗೆ ಅಧಿಕಾರಿಗಳ ಆಕ್ರೋಶ
ಇನ್ನು ಆನೆ ಮೇಲೆ ಬೆಂಕಿ ಕೊಳ್ಳಿ ಎಸೆದ ವರ್ತನೆಯನ್ನು ಪ್ರಾಣಿಪ್ರಿಯರು ಖಂಡಿಸಿದ್ದು, ಇಂತಹ ನಡೆಗಳಿಂದ ಪ್ರಾಣಿಗಳು ಮತ್ತಷ್ಟು ಆಕ್ರೋಶಗೊಳ್ಳುತ್ತವೆ. ಆನೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮತ್ತು ಕಿರುಕುಳ ನೀಡುವುದು ಸರಿಯಲ್ಲ. ಅಂತೆಯೇ ಆನೆಗೆ ಕಿರುಕುಳ ನೀಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.