ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಜಿಐ ಟ್ಯಾಗ್ ಪಡೆಯುವ ಪ್ರಕ್ರಿಯೆಗೆ ಚಾಲನೆ!

ಎಲ್ಲವೂ ಅಂದುಕೊಂಡಂತೆಯೇ ಆದರೆ ಶೀಘ್ರದಲ್ಲೆ ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಭೌಗೋಳಿಕ ಸನ್ನದು (ಜಿಐ ಟ್ಯಾಗ್) ಲಭ್ಯವಾಗಲಿದೆ. 
ಸಿಹಿ ಈರುಳ್ಳಿ
ಸಿಹಿ ಈರುಳ್ಳಿ

ಕಾರವಾರ:ಎಲ್ಲವೂ ಅಂದುಕೊಂಡಂತೆಯೇ ಆದರೆ ಶೀಘ್ರದಲ್ಲೆ ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಭೌಗೋಳಿಕ ಸನ್ನದು (ಜಿಐ ಟ್ಯಾಗ್) ಲಭ್ಯವಾಗಲಿದೆ. 

ಹಲವು ಶತಮಾನಗಳಿಂದ ಈ ಬೆಳೆಗಳನ್ನು ಸಣ್ಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಸ್ವಾದಿಷ್ಟ ಇಶಾದ್ ಮಾವು ಅಂಕೋಲದಿಂದ, ಸಿಹಿ ಈರುಳ್ಳಿ ಕುಮಟಾದಿಂದ, ಹೊನ್ನಾವರದ ವೀಳ್ಯದೆಲೆ, ಭಟ್ಕಳದ ಮಲ್ಲಿಗೆಗಳು ಶತಮಾನಗಳಿಂದ ಬೆಳೆಯಲ್ಪಡುತ್ತಿರುವ ವಿಶೇಷವಾದ ಬೆಳೆಗಳಾಗಿವೆ, ಇವುಗಳಿಗೆ ಜಿಐ ಟ್ಯಾಗ್ ನ್ನು ಪಡೆಯುವುದಕ್ಕೆ  ತೋಟಗಾರಿಕಾ ಇಲಾಖೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. 

ಒಮ್ಮೆ ಜಿಐ ಟ್ಯಾಗ್ ಲಭ್ಯವಾದಲ್ಲಿ ಅದರಿಂದ ಈ ಬೆಳೆಗಳಿಗೆ ಅಂತಾರಾಷ್ಟ್ರೀಯ ಖ್ಯಾತಿ, ಮನ್ನಣೆಯನ್ನು ತಂದುಕೊಡಲಿದ್ದು, ರೈತರಿಗೂ ಸಹಾಯವಾಗಲಿದೆ. ನಾವು ಜಿಐ ಟ್ಯಾಗ್ ಪಡೆಯುವುದಕ್ಕೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ.  ಜಿಐ ನಿರ್ದೇಶನಾಲಯಕ್ಕೆ ಪೂರೈಕೆ ಮಾಡಬೇಕಿರುವ ಡೇಟಾ ಸಂಗ್ರಹಿಸಲಾಗುತ್ತಿದೆ ಎಂದು ಕಾರವಾರದ ತೋಟಗಾರಿಕಾ ಇಲಾಖೆ ನಿರ್ದೇಶಕ ಸತೀಶ್ ತಿಳಿಸಿದ್ದಾರೆ. 

ಸಿಹಿ ಈರುಳ್ಳಿ ಇತರ ಈರುಳ್ಳಿಗಳಂತೆ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಈರುಳ್ಳಿಗೆ ದೂರದ ಪ್ರದೇಶಗಳಿಂದಲೂ ಬೇಡಿಕೆ ಹೆಚ್ಚುತ್ತಿದೆ. ಇದು ಜಿಐ ಟ್ಯಾಗ್ ಪಡೆಯುವುದಕ್ಕೆ ಅತ್ಯಂತ ಸೂಕ್ತವಾದ ಬೆಳೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಮಾಜಿ ನಿರ್ದೇಶಕ ಎಸ್ ವಿ ಹಿತ್ತಲಮನಿ

ಕಪ್ಪು ಇಶಾದ್ ಮಾವು ಅತ್ಯಂತ ರುಚಿಕರ ಹಾಗೂ ತಿರುಳಿರುವ ಹಣ್ಣಾಗಿದೆ. ಈ ಹಿಂದೆ ಡಬ್ಬಿಯಲ್ಲಿಟ್ಟು ಅದನ್ನು ರಫ್ತು ಮಾಡಲಾಗುತ್ತಿತ್ತು. ಅದರ ಗತ ವೈಭವ ಮರುಕಳಿಸುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಸತೀಶ್

ಹೊನ್ನಾವರದ ವೀಳ್ಯದೆಲೆ ರಾಣಿ ಎಲೆ ಎಂದೇ ಖ್ಯಾತಿ ಪಡೆದಿದ್ದು, ಕಳೆದ 500 ವರ್ಷಗಳಿಂದಲೂ ಬೆಳೆಯಲಾಗುತ್ತಿದೆ. ಈ ತಳಿಯನ್ನು ಖ್ಯಾತ ರಾಣಿ ಚೆನ್ನಭೈರಾ ದೇವಿ ಪೋಷಿಸಿದರು ಎಂಬ ಉಲ್ಲೇಖವೂ ಇದೆ. 

ಇನ್ನು ಭಟ್ಕಳ ಮಲ್ಲಿಗೆಯಂತೂ ಬಂಟ್ ಹಾಗೂ ಸ್ಥಳೀಯವಾಗಿರುವ ಇತರ ಸಮುದಾಯಗಳಿಗೆ ಅತ್ಯಂತ ಪ್ರಿಯವಾಗಿದ್ದು, ಭಟ್ಕಳ ಮಲ್ಲಿಗೆ ಇಲ್ಲದೇ ಯಾವ ವಿವಾಹವೂ ಪೂರ್ಣ ಎನಿಸುವುದಿಲ್ಲ. 

ಆದರೆ ಜಿಐ ಟ್ಯಾಗ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಜೀವಂತ ಅಥವಾ ನಿರ್ಜೀವ ಯಾವುದೇ ಅಂಶವಾಗಿರಲಿ ಜಿಐ ಟ್ಯಾಗ್ ಪಡೆಯುವುದಕ್ಕೆ ಅದನ್ನು ಶತಮಾನಗಳಿಂದ ಪೋಷಿಸಲಾಗುತ್ತಿದೆ ಎಂಬುದಕ್ಕೆ ಪೂರಕ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಸಮಿತಿಗೆ ಅದು ಮಾನ್ಯ ಎನಿಸಿದರೆ ಮಾತ್ರವೇ ಜಿಐ ಟ್ಯಾಗ್ ನೀಡಲಾಗುತ್ತದೆ. ಮಾಹಿತಿಯ ಕೊರತೆಯ ಕಾರಣದಿಂದಾಗಿ ಹಲವು ಅರ್ಜಿಗಳು ಇನ್ನೂ ಹಾಗೆಯೇ ಬಾಕಿ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com