ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ: 27 ಆರೋಪಿಗಳ ಬಂಧನ, ಸ್ವಯಂಪ್ರೇರಿತ ದೂರು ದಾಖಲು, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ

ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.

ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ ಕೆ ತ್ಯಾಗರಾಜನ್ ತಿಳಿಸಿದ್ದಾರೆ.

ಸೆಕ್ಷನ್ 144 ಜಾರಿ: ಘಟನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಇಂದು ಬೆಳಗ್ಗೆ 8 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಬೆಳಗಾವಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಸಹ ಆಯುಕ್ತರು ತಿಳಿಸಿದ್ದಾರೆ.

ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡ ಪೊಲೀಸರು: ಎಂಇಎಸ್ ಪುಂಡರ ಅಟ್ಟಹಾಸ ಮಿತಿಮೀರಿದ ಹಿನ್ನೆಲೆಯಲ್ಲಿ ನಗರದ ಮೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇಬಜಾರ್ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಾನೂನು ಸುವ್ಯವಸ್ಥೆ ಹಾಳು ಮಾಡುವುದು, ಭಾಷಾ ವೈಷಮ್ಯ ಮೂಡಿಸುವುದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನೂರಾರು ಎಂಇಎಸ್ ಪುಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ: ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಇಂದು ನಸುಕಿನ ಜಾವ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನಸಂಚಾರವಿರದ ಹೊತ್ತಿನಲ್ಲಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ವಿರೂಪಗೊಳಿಸಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದಾರೆ. ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಂತರ ಸ್ಥಳದಲ್ಲಿ ತೀವ್ರ ಗಲಾಟೆ, ಗದ್ದಲ ನಡೆದಿದೆ. ಕರ್ನಾಟಕ ಸರ್ಕಾರದ, ಪೊಲೀಸ್ ಇಲಾಖೆಯ ವಾಹನಗಳನ್ನು ಗುರಿಯಾಗಿಟ್ಟುಕೊಂಡು ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ. ದುರ್ಘಟನೆಯಲ್ಲಿ ಅನೇಕ ಕಾರುಗಳು ಪುಡಿಯಾಗಿವೆ. ಈ ಘಟನೆಯ ನಂತರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೆ ನಮ್ಮ ಸರ್ಕಾರ ಬಿಡುವುದಿಲ್ಲ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪುಂಡಾಟಗಳನ್ನು ಹತ್ತಿಕ್ಕುತ್ತೇವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇವೆ. ತಪ್ಪಿತಸ್ಥರಿಗೆ ಈ ಬಾರಿ ಭಯ ಹುಟ್ಟಿಸುತ್ತೇವೆ. ಪೊಲೀಸರು ತೆಗೆದುಕೊಳ್ಳುವ ಕ್ರಮಗಳನ್ನು ಕಾದು ನೋಡಿ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com