ತುಮಕೂರು ರಸ್ತೆ ಫ್ಲೈಓವರ್ ಮೇಲೆ 1 ವಾರ ಸಂಚಾರ ಬಂದ್: ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ; ವಾಹನ ಸವಾರರ ಪರದಾಟ
ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನೆಲಮಂಗಲ- ಗೊರಗುಂಟೆ ಪಾಳ್ಯ ಫ್ಲೈ ಓವರ್‌ನಲ್ಲಿ ಸ್ಪ್ಯಾಬ್ ಬಿಗಿಗೊಳಿಸುವ ಕೇಬಲ್ ಸಡಿಲಗೊಂಡಿದ್ದು, ಶನಿವಾರ ಸಂಜೆ ಬಳಿಕ ಸಂಚಾರ ನಿರ್ಬಂಧಿಸಲಾಗಿದೆ.
Published: 26th December 2021 10:15 AM | Last Updated: 27th December 2021 07:25 PM | A+A A-

ತುಮಕೂರು ರಸ್ತೆ ಮೇಲ್ಸೇತುವೆ
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನೆಲಮಂಗಲ- ಗೊರಗುಂಟೆ ಪಾಳ್ಯ ಫ್ಲೈ ಓವರ್‌ನಲ್ಲಿ ಸ್ಪ್ಯಾಬ್ ಬಿಗಿಗೊಳಿಸುವ ಕೇಬಲ್ ಸಡಿಲಗೊಂಡಿದ್ದು, ಶನಿವಾರ ಸಂಜೆ ಬಳಿಕ ಸಂಚಾರ ನಿರ್ಬಂಧಿಸಲಾಗಿದೆ.
102-103ನೇ ಪಿಲ್ಲರ್ ನಡುವಿನ ಸ್ಲಾಬ್‌ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಗೊರಗುಂಟೆಪಾಳ್ಯ-ನಾಗಸಂದ್ರದ 4 ಕಿಲೋಮೀಟರ್ ದೂರದ ಫ್ಲೈಓವರ್ ಬಂದ್ ಮಾಡಲಾಗಿದ್ದು ಬೆಳ್ಳಂಬೆಳಗ್ಗೆ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಇನ್ನು ಡಿಸೆಂಬರ್ 31ರವರೆಗೆ ಫ್ಲೈ ಓವರ್ ಮೇಲೆ ಸಂಚಾರ ಬಂದ್ ಮಾಡಲಾಗಿದೆ.
ದೋಷ ಸರಿಪಡಿಸಲು ಒಂದು ವಾರ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿದ್ದಾರೆ. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ನಿರ್ವಹಣೆ ಮಾಡುತ್ತಿದ್ದಾಗ ಸ್ಪ್ಯಾಬ್ ಬಿಗಿಗೊಳಿಸುವ ಕೇಬಲ್ ಸಡಿಲವಾಗಿರುವುದು ಕಂಡು ಬಂದಿದೆ. ತಕ್ಷಣವೇ ಫ್ಲೈಓವರ್ ಮೇಲೆ ಎರಡೂ ಬದಿಯ ಸಂಚಾರ ನಿರ್ಬಂಧಿಸಲಾಯಿತು. ಲೋಪ ತಕ್ಷಣ ಪತ್ತೆಯಾಗಿದ್ದರಿಂದ ಭಾರಿ ಅನಾಹುತ ತಪ್ಪುವಂತಾಗಿದೆ.
ಇದನ್ನೂ ಓದಿ: ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ನಲ್ಲಿ 2 ಹೆಚ್ಚುವರಿ ಪ್ಲ್ಯಾಟ್ ಫಾರ್ಮ್: ಪಾರ್ಕಿಂಗ್ ಸಮಸ್ಯೆ ಇತ್ಯರ್ಥಕ್ಕೆ ಕ್ರಮ
ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಈ ಫ್ಲೈ ಓವರ್‌ನಲ್ಲಿ ಇಂಟರ್ ಲಾಕಿಂಕ್ ಸಿಸ್ಟಮ್ ಅಳವಡಿಸಲಾಗಿದೆ. ಒಂದು ಪಿಲ್ಲರ್‌ನಿಂದ ಇನ್ನೊಂದು ಪಿಲ್ಲರ್ ನಡುವಿನ ಸ್ಪ್ಯಾಬ್‌ಗಳನ್ನ ಬಿಗಿಗೊಳಿಸಲು ಅಳವಡಿಸಿದ ಕೇಬಲ್‌ನಲ್ಲಿ ಒಂದು ಕೇಬಲ್ ಸಡಿಲವಾಗಿರುವುದು ಕಂಡು ಬಂದಿದೆ . ಫ್ಲೈ ಓವರ್‌ನಲ್ಲಿ 16 ಕೇಬಲ್‌ಗಳನ್ನ ಅಳವಡಿಸಲಾಗಿದೆ. ಉಳಿದ 15 ಕೇಬಲ್‌ಗಳು ಸುಭದ್ರವಾಗಿವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ತಾಂತ್ರಿಕ ವಿಭಾಗದವರು ಆಗಮಿಸಲಿದ್ದು, ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು, ಅಲ್ಲಿಯವರೆಗೂ ಫ್ಲೈ ಓವರ್ ಬಂದ್ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಮುಖ್ಯಸ್ಥರು ತಿಳಿಸಿದ್ದಾರೆ.