ಮೂಡುಬಿದಿರೆಯಲ್ಲಿ 'ಸೀ ಫುಡ್ ಪಾರ್ಕ್' ಯೋಜನೆ: ಸ್ಥಳೀಯರ ತೀವ್ರ ವಿರೋಧ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರಾಜ್ಯ ಸರ್ಕಾರ ಬೃಹತ್ ಸೀಫುಡ್ ಘಟಕ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 
ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸುತ್ತುವರೆದಿರುವ ಸ್ಥಳೀಯರು.
ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸುತ್ತುವರೆದಿರುವ ಸ್ಥಳೀಯರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ನಿಡ್ಡೋಡಿಯಲ್ಲಿ ರಾಜ್ಯ ಸರ್ಕಾರ ಬೃಹತ್ ಸೀಫುಡ್ ಘಟಕ ಸ್ಥಾಪನೆ ಮಾಡಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮೀನುಗಾರಿಕಾ ಸಚಿವ ಅಂಗಾರ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸ್ಥಳೀಯರಿಗೆ ಮಾಹಿತಿ ನೀಡದೆ ನಿಡ್ಡೋಡಿಗೆ ಪರಿಶೀಲನೆ ನಡೆಸಲು ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು ಸಚಿವರು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇತ್ತೀಚೆಗಷ್ಟೇ ಪ್ರಧಾನ್ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಯೋಜನೆಯನ್ನು ಘೋಷಣೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಈ ಯೋಜನೆಯು ಮೀನು ಆಹಾರ ಸಂಸ್ಕರಣೆ, ಅವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೌಲಭ್ಯಗಳ ಒದಗಿಸಲಿದೆ ಎಂದು ಹೇಳಿದ್ದರು. 

ಆದರೆ, ಯೋಜನೆಯಿಂದ ಪರಿಸರ ಮಾಲೀನ್ಯವಾಗಲಿದ್ದು, ತಮ್ಮ ಹೊಲಗಳಿಗೆ ಹಾನಿಯುಂಟಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ನಿಡ್ಡೋಡಿ ಗ್ರಾಮದ ನಿವಾಸಿ ದಿನೇಶ್ ಎಂಬುವವರು ಮಾತನಾಡಿ, ಅಧಿಕಾರಿಗಳು ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿಲ್ಲ. ಕಾರ್ಖಾನೆಯ ಒಳಚರಂಡಿ ಸಂಪರ್ಕ, ಕಾರ್ಖಾನೆಗಳು ಹೊರಸೂಸುವ ದುರ್ವಾಸನೆಗೆ  ಪರಿಹಾರ ಮತ್ತು ಇತರ ರೀತಿಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದೇವೆ. ಈ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಯೋಜನೆ ಮೂಲಕ ನಮ್ಮ ದಾರಿ ತಪ್ಪಿಸುವ ಕೆಲಸಗಳಾಗಬಾರದು. ಆದ್ದರಿಂದ, ಸ್ಥಳೀಯರೊಂದಿಗೆ ಸಭೆ ನಡೆಸಿ ನಮ್ಮ ಅನುಮಾನಗಳನ್ನು ನಿವಾರಿಸುವಂತೆ ನಾವು ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ. 

ಮತ್ತೊಬ್ಬ ನಿವಾಸಿ ಮಾತನಾಡಿ, ಇದೇ ರೀತಿಯ ಯೋಜನೆ ಮಂಗಳೂರಿನಲ್ಲೂ ಬಂದಿತ್ತು. ಆದರೆ, ಸ್ಥಳೀಯರಿಗೆ ಯಾವುದೇ ರೀತಿಯ ಉದ್ಯೋಗಾವಕಾಶಗಳೂ ದೊರೆಯಲಿಲ್ಲ. ಬೇರೆ ರಾಜ್ಯದವರು ಉದ್ಯೋಗ ಪಡೆದುಕೊಂಡಿದ್ದಾರೆ. ಮಾಲೀನ್ಯ ಸಮಸ್ಯೆಗೂ ಪರಿಹಾರ ಸಿಗಲಿಲ್ಲ. ಇಲ್ಲಿಯೂ ಅದೇ ರೀತಿ ಆಗಲು ನಾವು ಅವಕಾಶ ಕೊಡುವುದಿಲ್ಲತ. ನಮ್ಮಲ್ಲಿ ಪದವಿ ಶಿಕ್ಷಣ ಪಡೆದುಕೊಂಡವರು ಸಾಕಷ್ಟು ಯುವಕರಿದ್ದಾರೆ. ಇಲ್ಲಿ ಕಾರ್ಖಾನೆ ಬಂದಿದ್ದೇ ಆದರೆ, ಅವರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಕಾರ್ಖಾನೆ ತೆರೆಯಲು ಅವಕಾಶ ನೀಡಿದ್ದೇ ಆದರೆ, ಇಲ್ಲಿರುವ ಬಾವಿಗಳು ಹಾಗೂ ಕೊಳಗಳು ವಿಷಯುಕ್ತವಾಗುವ ಭಯವಿದೆ. ಕಾರ್ಖಾನೆ ಹೊರಸೂಸುವ ಗಾಳಿ ಕೆಟ್ಟವಾಸನೆಯಿಂದ ಕೂಡಿದ್ದು, ಇಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಿದ್ದೇ ಆದರೆ, ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸಚಿವರು ಹಾಗೂ ಅಧಿಕಾರಿಗಳು, ಕಾರ್ಖಾನೆ ಸ್ಥಾಪನೆಯಾಗಿದ್ದೇ ಆದರೆ, ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆಗಳಾಗುವಿದಿಲ್ಲ. ಸ್ಥಳೀಯರಿಗೆ 1,500 ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ. ಆದ್ಯತೆ ಮೇರೆಗೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com