ಮಂಡ್ಯದ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು: ಸಂಸದೆ ಸುಮಲತಾ ಒತ್ತಾಯ
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಒತ್ತಾ ಯಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
Published: 09th July 2021 07:42 AM | Last Updated: 09th July 2021 01:15 PM | A+A A-

ಸುಮಲತಾ ಅಂಬರೀಷ್
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿಗಳ ಬಳಿ ಒತ್ತಾ ಯಿಸುವುದಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜಲಾಶಯ ಮಂಡ್ಯ ಜಿಲ್ಲೆಗೆ ಸೀಮಿತವಾಗಿಲ್ಲ. ಬೆಂಗಳೂರು ನಗರಕ್ಕೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಡ್ಯಾಂಗೆ ಅಪಾಯವಾದರೆ ಸಾಕಷ್ಟು ಜನರಿಗೆ ತೊಂದರೆಯಾಗಲಿದೆ. ಹೀಗಾಗಿ ಜಲಾಶಯ ರಕ್ಷಣೆ ಮಾಡಲು ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕಿದೆ ಎಂದು ಹೇಳಿದ್ದಾರೆ.
ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮಗೆ ಸಾಕಷ್ಟು ಅಡ್ಡಿಗಳು ಎದುರಾದವು. ರಸ್ತೆಗಳಿಗೆ ಅಡ್ಡಲಾಗಿ ಕಲ್ಲುಗಳನ್ನು ಇಡಲಾಗಿತ್ತು. ಒಬ್ಬ ಸಂಸದರಿಗೆ ಇಷ್ಟೊಂದು ತೊಂದರೆಗಳಾಗಿರುವಾಗ ಅಧಿಕಾರಿಗಳಿಗೆ ಯಾವ ರೀತಿ ಆಗಿರುತ್ತದೆ. ಅವರು ಎಷ್ಟು ಒತ್ತಡದಲ್ಲಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಹಾಗಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಸೂಕ್ತ ಎಂದು ತಿಳಿಸಿದ್ದಾರೆ.
ಕೆಲ ಕ್ಷೇತ್ರಗಳಿಗೆ ಸುಮಲತಾ ಅವರು ಭೇಟಿ ನೀಡದಿರುವ ಕುರಿತ ಕೆಲ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕೆಆರ್ಎಸ್ ಸುತ್ತಮುತ್ತಲಿನ ಗಣಿ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಕೆಲ ವ್ಯಕ್ತಿಗಳ ಅನುಮತಿಯ ಅಗತ್ಯವಿರುತ್ತದೆ ಎಂದಿದ್ದಾರೆ.
ಒಂದು ದಿನಕ್ಕೆ 500 ಲಾರಿಗಳಲ್ಲಿ ಗಣಿ ಸಾಮಾಗ್ರಿಗಳು ರವಾನೆಯಾಗುತ್ತಿದೆ. ಲೈಸೆನ್ಸ್ ಇಲ್ಲದೆ, ರಾಜಧನ ಪಾವತಿಸದೆ ಅಕ್ರಮವಾಗಿ ಗಣಿ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇದು ನಿಲ್ಲಬೇಕಿದೆ. ಅಕ್ರಮ ಗಣಿಗಾರಿಕೆ ಸ್ಥಳಧಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಮೆಗ್ಗರ್ ಬ್ಲಾಸ್ಟ್ ಗಳಿಂದ ಮನೆಗಳು ಬಿರುಕು ಬಿಡುತ್ತಿವೆ. ಕುಳಿಗಳಿಗೆ ರಾಸಾಯನಿಕ ಪುಡಿ ತುಂಬುತ್ತಿರುವುದರಿಂದ ಸ್ಫೋಟ ಸಂಭವಿಸಿದ ವೇಳೆ ಅದು ಗಾಳಿಯಲ್ಲಿ ಸೇರಿ ಸುತ್ತಮುತ್ತಲಿನ ಜನರು ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಸ್ಫೋಟದ ಶಬ್ಧಕ್ಕೆ ವಯಸ್ಸಾದವರಲ್ಲಿ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ. ಇವೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಗಣಿಗಾರಿಕೆ ನಡೆಸುವವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೋ ಅಥವಾ ನೀವೇ ಅಕ್ರಮ ಗಣಿಗಾರಿಕೆ ನಡೆಸುವವರೊಂದಿಗೆ ಶಾಮೀಲಾಗಿದ್ದೀರೋ ಎಂಬ ಶಂಕೆಗಳು ಮೂಡಿದೆ. ಈಗಲಾದರೂ ಎಚ್ಚೆತ್ತು ಅಕ್ರಮ ಗಣಿ ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕು ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಡ್ಯ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಲಾಶಯ ರಕ್ಷಿಸಿಸುವ ಕುರಿತು ನನ್ನ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.