ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿವಾಸದ ಎದುರು ಹೈಡ್ರಾಮಾ: ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ, ಕ್ಷಮೆ ಕೇಳಲು ಆಗ್ರಹ
ಜೆಡಿಎಸ್ ದಳಪತಿಗಳು-ಮಂಡ್ಯ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧ ಈಗ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ. ಅದೀಗ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಬೆಂಗಳೂರಿಗೆ ತಲುಪಿದೆ.
Published: 10th July 2021 08:22 AM | Last Updated: 10th July 2021 01:31 PM | A+A A-

ರಾಕ್ ಲೈನ್ ವೆಂಕಟೇಶ್
ಬೆಂಗಳೂರು: ಜೆಡಿಎಸ್ ದಳಪತಿಗಳು-ಮಂಡ್ಯ ಸಂಸದೆ ಸುಮಲತಾ ನಡುವಿನ ವಾಗ್ಯುದ್ಧ ಈಗ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ. ಅದೀಗ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿ ಬೆಂಗಳೂರಿಗೆ ತಲುಪಿದೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಿವಾಸದ ಎದುರು ಬೆಳ್ಳಂಬೆಳಗ್ಗೆಯಿಂದ ಹೈಡ್ರಾಮಾ ನಡೆಯುತ್ತಿದೆ. ರಾಕ್ ಲೈನ್ ವೆಂಕಟೇಶ್ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರು, ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿಗಳು ಮುತ್ತಿಗೆ ಹಾಕಲು ಯತ್ನಿಸುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಗೆ ಧಿಕ್ಕಾರ ಎಂಬ ಕೂಗು ಜೋರಾಗಿದೆ, ನಿರ್ಮಾಪಕರು ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದಾರೆ.
ಭದ್ರತೆಗೆಂದು ರಾಕ್ ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು ಅದನ್ನು ತಳ್ಳಿ ನುಗ್ಗಿ ಹೋಗಲು ಪ್ರತಿಭಟನಾಕಾರರು ಯತ್ನಿಸುತ್ತಿದ್ದಾರೆ. ಮಂಡ್ಯ ರಾಜಕೀಯದಲ್ಲಿ ರಾಕ್ ಲೈನ್ ವೆಂಕಟೇಶ್ ಗೆ ಏನು ಕೆಲಸವಿದೆ, ಸುಮಲತಾ ಅವರನ್ನು ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಏಕವಚನ ಪ್ರಯೋಗಿಸಿ ಮಾತನಾಡಿದ್ದರು. ಅದೇನ ಮಹಿಳೆಗೆ ಅವರು ನೀಡುತ್ತಿರುವ ಗೌರವ, ಹೆಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಇಲ್ಲಸಲ್ಲದ ವೈಯಕ್ತಿಕ ಆರೋಪ ಮಾಡಿದ್ದಾರೆ, ಕೂಡಲೇ ರಾಕ್ ಲೈನ್ ವೆಂಕಟೇಶ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಇಲ್ಲಿಂದ ತೊಲಗುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ರಾಕ್ ಲೈನ್ ಅವರು ನಿವಾಸದಿಂದ ಹೊರಗೆ ಬಂದು ಪೊಲೀಸರ ನಡುವೆ ಭದ್ರತೆಯಲ್ಲಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ, ಅವರು ಎಲ್ಲೇ ಹೋದರೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಎಸ್ ಆರ್ ಪಿ ಭದ್ರತೆ: ಕಾರ್ಯಕರ್ತರ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ರಾಕ್ ಲೈನ್ ವೆಂಕಟೇಶ್ ನಿವಾಸದ ಮುಂದೆ ಸದ್ಯ ಒಂದು ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ.