ಫೇಸ್ಬುಕ್ ಪೋಸ್ಟ್ ಕುರಿತು ಉಡುಪಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ತನಿಖೆಗೆ ಎಸ್ಪಿ ಆದೇಶ
ಫೇಸ್ಬುಕ್ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣನಾಯಕ್ ಎಂಬುವವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ತನಿಖೆ ನಡೆಸುವಂತೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಕುಂದಾಪುರ ಡಿವೈಎಸ್ಪಿ ಶ್ರೀನಾಥ್ ಅವರಿಗೆ ಆದೇಶಿಸಿದ್ದಾರೆ.
Published: 10th July 2021 11:32 AM | Last Updated: 10th July 2021 01:39 PM | A+A A-

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರಾಧಾಕೃಷ್ಣ
ಉಡುಪಿ: ಫೇಸ್ಬುಕ್ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣನಾಯಕ್ ಎಂಬುವವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ತನಿಖೆ ನಡೆಸುವಂತೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಕುಂದಾಪುರ ಡಿವೈಎಸ್ಪಿ ಶ್ರೀನಾಥ್ ಅವರಿಗೆ ಆದೇಶಿಸಿದ್ದಾರೆ.
ರಾಧಾಕೃಷ್ಣ ನಾಯಕ್ ಅವರು ದೇಶದ ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆಂದು ಹಿಂದು ಜಾಗರಣ ವೇದಿಕೆ ಕಾರ್ಕಳ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆದಿಕೊಂಡ ಪೊಲೀಸರು, ಏಕಾಏಕಿ ಹಲ್ಲೆ ನಡೆಸಿದ್ದಾರೆಂಬ ಆರೋಪಗಳು ಕೇಳಿಬಂದಿದೆ.
ರಾಧಾಕೃಷ್ಣ ಅವರು ಹೃದ್ರೋಗಿಯಾಗಿದ್ದು, ಪೊಲೀಸರ ದೌರ್ಜನ್ಯದಿಂದ ತೀವ್ರ ಅಸ್ವಸ್ಥರಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಹೇಳಲಾಗುತ್ತಿದೆ.
ಪೊಲೀಸರ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆಗ್ರಹಿಸಿದ್ದರು. ಅದರಂತೆ ಇದೀಗ ಉಡುಪಿ ಎಸ್ಪಿ ತನಿಖೆಗೆ ಕುಂದಾಪುರ ಡಿವೈಎಸ್ಪಿ ಅವರನ್ನು ನೇಮಿಸಿದ್ದಾರೆ.
ಏನಿದು ಘಟನೆ...?
ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಅವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಅವರ ಫೇಸ್ ಬುಕ್ ನಲ್ಲಿ ಸೈನಿಕರ ವಿರುದ್ಧ ಅವಹೇಳನಕಾರಿ ಬರೆದಿದ್ದಾರೆಂಬ ಪೋಸ್ಟ್ ವೈರಲ್ ಆಗಿತ್ತು. ಆದರೆ, ಇದು ನಕಲಿ ಪೋಸ್ಟ್ ಯಾರೋ ಕಿಡಿಗೇರಿಗಳು ಈ ಕೃತ್ಯ ಎಸಗಿದ್ದಾರೆಂದು ಬೆಂಗಳೂರು ಉತ್ತರ ಗಂಗಮ್ಮನ ಗುಡಿ ಠಾಣೆಗೆ ದೂರಿ ನೀಡಿದ್ದರು. ಅಲ್ಲಿಗೆ ಪ್ರಕರಣ ಮುಕ್ತಾಯವಾಗಿತ್ತು.
ಇದೀಗ ರಾಧಾಕೃಷ್ಣ ಅವರು ಉದ್ಯೋಗ ಕಳೆದುಕೊಂಡು ಊರಿಗೆ ಮರಳಿದ್ದು, ಮತ್ತೊಮ್ಮೆ ಅದೇ ಪೋಸ್ಟ್ ವೈರಲ್ ಆಗತೊಡಗಿತ್ತು. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಅವರನ್ನು ಪೊಲೀಸರು ಮತ್ತೆ ಠಾಣೆಗೆ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.