ಮೇಕೆದಾಟು ಯೋಜನೆ: ಕರ್ನಾಟಕ, ತಮಿಳು ನಾಡು ಮಧ್ಯೆ ಮತ್ತೊಂದು ರಾಜಕೀಯ ಜಿದ್ದಾಜಿದ್ದಿ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕರ್ನಾಟಕ ಮತ್ತು ತಮಿಳು ನಾಡು ನಡುವೆ ರಾಜಕೀಯ ಕದನಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟುವ ಸಂಬಂಧ ಎರಡೂ ರಾಜ್ಯಗಳ ನಡುವೆ ವೈಮನಸ್ಸಿಗೆ ಕಾರಣವಾಗಿದೆ.
ಮೇಕೆದಾಟು ಪ್ರದೇಶ
ಮೇಕೆದಾಟು ಪ್ರದೇಶ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕರ್ನಾಟಕ ಮತ್ತು ತಮಿಳು ನಾಡು ನಡುವೆ ರಾಜಕೀಯ ಕದನಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟುವ ಸಂಬಂಧ ಎರಡೂ ರಾಜ್ಯಗಳ ನಡುವೆ ವೈಮನಸ್ಸಿಗೆ ಕಾರಣವಾಗಿದೆ.

ತಮಿಳು ನಾಡಿನ ತೀವ್ರ ವಿರೋಧವಿದ್ದರೂ ಕೂಡ 9 ಸಾವಿರ ಕೋಟಿ ರೂಪಾಯಿ ಮೊತ್ತದ ಈ ಯೋಜನೆಯನ್ನು ಮುಂದುವರಿಸುವುದಾಗಿ ಕರ್ನಾಟಕ ಹೇಳುತ್ತಿದೆ. ಕಾರ್ಯ ಯೋಜನೆಯನ್ನು ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ ಸೂಚನೆ ನೀಡಿದ್ದಾರೆ. ಇದಕ್ಕೆ ತಮಿಳು ನಾಡು ಎಲ್ಲಾ ರೀತಿಯಲ್ಲಿ ಅಡ್ಡಗಾಲು ಹಾಕಲು ಯತ್ನಿಸುತ್ತಿದೆ. ನಾಳೆ ಚೆನ್ನೈಯಲ್ಲಿ ತಮಿಳು ನಾಡು ಸರ್ಕಾರ ಈ ಸಂಬಂಧ ಸರ್ವ ಪಕ್ಷ ಸಭೆ ಕರೆದಿದೆ.

ಈಗ ರಾಜಕೀಯ ಮತ್ತು ಭಾವನಾತ್ಮಕ ಸಮಸ್ಯೆಯಂತೆ ತೋರುತ್ತಿರುವ ಮುಖ್ಯ ಅಂಶವೆಂದರೆ ಕರ್ನಾಟಕದಿಂದ ಹರಿದು ಹೋಗುವ ಹೆಚ್ಚುವರಿ ನೀರನ್ನು ತಮಿಳು ನಾಡು ಬಳಸಲು ನೋಡುತ್ತಿರುವುದು. ಕಳೆದ 40 ವರ್ಷಗಳಿಂದ ನೋಡಿದರೆ ನೀರಾವರಿ ಸಂಪನ್ಮೂಲ ಇಲಾಖೆಯ ಲೆಕ್ಕಾಚಾರ ಪ್ರಕಾರ, ಕರ್ನಾಟಕಕ್ಕೆ 45 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್ (ಟಿಎಂಸಿ) ಹೆಚ್ಚುವರಿ ನೀರು ಬಳಕೆಗೆ ಸಿಗುತ್ತದೆ.

400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಒಂದು ಘಟಕವನ್ನು ಹೊಂದಿರುವ ಉದ್ದೇಶಿತ ಮೇಕೆದಾಟು ಯೋಜನೆಯಡಿ ಈ ಹೆಚ್ಚುವರಿ ನೀರನ್ನು ಬಳಸುವುದು ಸರ್ಕಾರದ ಉದ್ದೇಶವಾಗಿದೆ. 67 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಕರ್ನಾಟಕ ಮೇಕೆದಾಟು ಮೂಲಕ ಹೆಚ್ಚುವರಿ 4.75 ಟಿಎಂಸಿ ನೀರನ್ನು ಕುಡಿಯುವ ಅಗತ್ಯಕ್ಕೆ ಬಳಸಿಕೊಳ್ಳುವ ಯೋಜನೆಯನ್ನು ಹೊಂದಿದ್ದು ಇದರಿಂದ ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯಕ್ಕೂ ಅನುಕೂಲವಾಗಲಿದೆ.

ಪ್ರಸ್ತುತ ಬೆಂಗಳೂರು ನಗರಕ್ಕೆ ಸುಮಾರು 1,450 ಮಿಲಿಯನ್ ಲೀಟರ್ ನೀರು ಪ್ರತಿ ದಿನ ಬಳಕೆಗೆ ಸಿಗುತ್ತದೆ. ಮುಂದಿನ 10 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ನೀರಿನ ಬಳಕೆ 2 ಸಾವಿರದ 900 ಮಿಲಿಯನ್ ಲೀಟರ್ ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು. 2030ರ ನಂತರ ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಅವರು ಹೇಳುತ್ತಾರೆ.

ತಮಿಳು ನಾಡಿನ ವಿರೋಧ ಏಕೆ?: ಕರ್ನಾಟಕ ಮೇಕೆದಾಟು ಅಣೆಕಟ್ಟು ಕಟ್ಟಿದರೆ ಕಾವೇರಿ ನೀರಿನ 67 ಟಿಎಂಸಿ ನೀರು ಸಂಗ್ರಹಣೆಯಾಗಿ ನೀರಿನ ಸರಾಗ ಹರಿಯುವಿಕೆಗೆ ತಡೆಯಾಗುತ್ತದೆ. ತಮಿಳು ನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಭತ್ತ ಇಳುವರಿ ಬೆಳೆಯಲು ಕಾವೇರಿ ನೀರು ಜೀವನಾಡಿ, ಕರ್ನಾಟಕ ಅಣೆಕಟ್ಟು ಕಟ್ಟಿದರೆ ತಮಿಳು ನಾಡಿನ ಕಾವೇರಿ ಜಲಾನಯ ಪ್ರದೇಶದ ಜನರಿಗೆ ವ್ಯವಸಾಯಕ್ಕೆ ನೀರಿಗೆ ಸಮಸ್ಯೆಯಾಗುತ್ತದೆ ಎಂಬುದು ತಮಿಳು ನಾಡು ಸರ್ಕಾರದ ವಾದ. ಈ ಹಿನ್ನೆಲೆಯಲ್ಲಿ ತಮಿಳು ನಾಡು ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೋಗಿದ್ದು ಅಲ್ಲಿ ಇತ್ಯರ್ಥವಾಗಬೇಕಿದೆ. ಕರ್ನಾಟಕಕ್ಕೆ ಯೋಜನೆಗೆ ತಡೆಯೊಡ್ಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ತಮಿಳು ನಾಡು ಸರ್ಕಾರ ಪ್ರಯತ್ನಿಸುತ್ತಿದೆ.

ಕರ್ನಾಟಕದ ನಿಲುವು: ತಮಿಳು ನಾಡು ಸರ್ಕಾರದ ವಾದವನ್ನು ಕರ್ನಾಟಕ ತಳ್ಳಿಹಾಕುತ್ತಿದೆ. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳ ಜಲಾನಯದ ಪ್ರದೇಶಗಳ ಜನತೆಗೆ ಅನುಕೂಲವಾಗಲಿದೆ ಎನ್ನುತ್ತಿದೆ. ತಮಿಳು ನಾಡಿನ ರೈತರಿಗೆ ಇದರಿಂದ ಅನನುಕೂಲವೇನಿಲ್ಲ ಎಂದು ಇತ್ತೀಚೆಗೆ ಅಲ್ಲಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇದಕ್ಕೆ ತಮಿಳು ನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಒಪ್ಪುತ್ತಿಲ್ಲ, .ಯಾವುದೇ ಕಾರಣಕ್ಕೂ ಕರ್ನಾಟಕ ಮೇಕೆದಾಟು ಯೋಜನೆಯನ್ನು ಮುಂದುವರಿಸಬಾರದು ಎಂದು ಹೇಳುತ್ತಿದ್ದಾರೆ.

ಮೇಕೆದಾಟು ಯೋಜನೆ ಮುಂದುವರಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ. ತಮಿಳು ನಾಡು ಸರ್ಕಾರ ಇದನ್ನು ನಿಲ್ಲಿಸಲು, ತಡೆಯೊಡ್ಡಲು ಸಾಧ್ಯವಿಲ್ಲ. ಯಾಕೆಂದರೆ ಇದು ಕುಡಿಯುವ ನೀರಿನ ಯೋಜನೆ ಮತ್ತು ಇದರಲ್ಲಿ ಯಾವುದೇ ನೀರಾವರಿ ಯೋಜನೆಯ ವಿಷಯಗಳು ಒಳಗೊಂಡಿಲ್ಲ ಎನ್ನುತ್ತಾರೆ ನೀರಾವರಿ ತಜ್ಞ ಪ್ರೊ ಅರವಿಂದ್ ಗಳಗಳಿ.

ಹೆಚ್ಚುವರಿ ನೀರು ಹೊರಹೋಗುವ ವಿಷಯದಲ್ಲಿ ರಾಜ್ಯವು ತನ್ನ ಕಾನೂನು ಹಕ್ಕುಗಳನ್ನು ಪ್ರತಿಪಾದಿಸಿದೆ. ಇದು ತಮಿಳುನಾಡಿಗೆ ಪ್ರಯೋಜನಕಾರಿ, ವಿಶೇಷವಾಗಿ ಕರ್ನಾಟಕವು ನೀರಿನ ಕೊರತೆಯ ವರ್ಷಗಳಲ್ಲಿ 192 ಟಿಎಂಸಿಎಫ್ ಅನ್ನು ಬಿಡುಗಡೆ ಮಾಡಲು ಸಾಧ್ಯವಾಗದಿರುವ ಸಮಯದಲ್ಲಿ, ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಬಿಡುಗಡೆ ಮಾಡಬಹುದು ಎಂದು ಅವರು ಹೇಳುತ್ತಾರೆ.

ವಾಸ್ತವವಾಗಿ ತಮಿಳು ನಾಡಿನ ತಾಂತ್ರಿಕ ತಜ್ಞರು ಕೂಡ ಇದನ್ನು ಒಪ್ಪುತ್ತಿದ್ದಾರೆ, ಆದರೆ ಇದು ಹೆಚ್ಚು ರಾಜಕೀಯ ಮತ್ತು ಭಾವನಾತ್ಮಕ ವಿಷಯವಾಗಿರುವುದರಿಂದ ತಮಿಳು ನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದೆ. 192 ಟಿಎಂಸಿ ಅಡಿ ನೀರನ್ನು ತಮಿಳು ನಾಡಿಗೆ ಬಿಡುಗಡೆ ಮಾಡುವುದನ್ನು ಗೌರವಿಸುವವರೆಗೆ ಕಾವೇರಿ ಜಲ ವಿವಾದಗಳ ನ್ಯಾಯಮಂಡಳಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದನ್ನು ತಡೆಯುವುದಿಲ್ಲ. ನೀರಿನ ಬಿಡುಗಡೆಯು ಇಡೀ ವರ್ಷದಲ್ಲಿ ಹರಡುತ್ತದೆ.

ಯೋಜನೆಯ ಹಿನ್ನೆಲೆ: ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಪರಿಕಲ್ಪನೆಯನ್ನು ತಂದಿತ್ತು.  2008ರಲ್ಲಿ ರಾಜ್ಯ ಸರ್ಕಾರ ಯೋಜನೆಯನ್ನು ಆರಂಭಿಸಿತ್ತು. ಇದಕ್ಕೆ ತಮಿಳು ನಾಡು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿತು. ಕರ್ನಾಟಕ ಸರ್ಕಾರದ ಯೋಜನಾ ವರದಿಯನ್ನು ದೇಶದ ನೀರಿನ ನಿರ್ವಹಣೆಯ ಉನ್ನತ ಸಂಸ್ಥೆಯಾದ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತೆರವುಗೊಳಿಸಿದೆ. ಯೋಜನೆಯ ಅನುಷ್ಠಾನಕ್ಕಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲು ಆಯೋಗವು ತನ್ನ ತಾತ್ವಿಕ ಅನುಮೋದನೆಯನ್ನು ನೀಡಿತು. ಸುಮಾರು ಮೂರು ವರ್ಷಗಳ ಹಿಂದೆ, ಸುಮಾರು 6 ಸಾವಿರ ಕೋಟಿ ರೂಪಾಯಿಗಳ ಹೂಡಿಕೆ ಅನುಮತಿಗಾಗಿ ವರದಿಯನ್ನು ಸಲ್ಲಿಸಲಾಯಿತು, ಆದರೆ ಈಗ ಪರಿಷ್ಕೃತ ಯೋಜನಾ ವೆಚ್ಚ ಸುಮಾರು 9 ಸಾವಿರ ಕೋಟಿ ರೂಪಾಯಿಯಾಗಿದೆ. 

ಮೇಕೆದಾಟು ಕೆಲಸವನ್ನು ಪ್ರಾರಂಭಿಸಲು ಅನುಮತಿಗಾಗಿ ಕಾಯುತ್ತಿದ್ದರೂ ಸಹ, ತಾಂತ್ರಿಕ ವರದಿಗಳನ್ನು ಸಿದ್ಧಪಡಿಸುವ ದೃಷ್ಟಿಯಿಂದ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಕಾನೂನು ಸಮಸ್ಯೆಗಳನ್ನು ಬಗೆಹರಿಸುವುದರ ಹೊರತಾಗಿ, ಕರ್ನಾಟಕಕ್ಕೆ ಪರಿಸರ ವಿಜ್ಞಾನ, ಅರಣ್ಯ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಅನುಮೋದನೆ ಬೇಕಾಗುತ್ತದೆ,  ಈ ಯೋಜನೆಗಾಗಿ 4 ಸಾವಿರದ 700 ಹೆಕ್ಟೇರ್ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಯೋಜನೆಯನ್ನು ಮುಂದುವರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಶೀಘ್ರದಲ್ಲೇ ಸಭೆ ನಡೆಸುವ ನಿರೀಕ್ಷೆಯಿದೆ.

ಮೇಕೆದಾಟು: ಬೆಂಗಳೂರು ಹೊರವಲಯ ಕನಕಪುರ ತಾಲ್ಲೂಕಿನಲ್ಲಿ ಮೇಕೆದಾಟು ಇದ್ದು ದಟ್ಟು ಅರಣ್ಯ ವಲಯವನ್ನು ಹೊಂದಿರುವ ಪ್ರದೇಶವಾಗಿದೆ, ಇಲ್ಲಿ ಕಾವೇರಿ ನದಿ ನೀರು ಹರಿಯುತ್ತದೆ. ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಮೇಕೆದಾಟು ಬೆಂಗಳೂರಿಗರಿಗೆ ವಾರಾಂತ್ಯಗಳಲ್ಲಿ ಪ್ರಶಸ್ತ ಪಿಕ್ ನಿಕ್ ಸ್ಥಳವಾಗಿದೆ.

ಅಣೆಕಟ್ಟು ಪ್ರದೇಶ: 67 ಟಿಎಂಸಿಎಫ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಜಲಾಶಯವು ಸಂಗಮದಿಂದ 4 ಕಿ.ಮೀ ಕೆಳಹರಿವಿನಲ್ಲಿದೆ. ಈ ಅಣೆಕಟ್ಟು ಕರ್ನಾಟಕ ಗಡಿಯಲ್ಲಿರುವ ತಮಿಳುನಾಡಿನ ಬಿಲಿಗುಂಡ್ಲುವಿನಿಂದ 50 ಕಿಲೋ ಮೀಟರ್ ದೂರದಲ್ಲಿ ತಮಿಳು ನಾಡಿನ ಮೆಟ್ಟೂರು ಜಲಾಶಯದಿಂದ 100 ಕಿಲೋ ಮೀಟರ್ ದೂರದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com