
ಸಂಗ್ರಹ ಚಿತ್ರ
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಮಾಧ್ಯಮ ನಿರ್ಬಂಧ ಎಂಬ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಪಸ್ ಪಡೆದಿದ್ದಾರೆ.
ವಿಧಾನಸೌಧದ ಕಾರಿಡಾರ್‌ಗಳಲ್ಲಿ ಪತ್ರಿಕಾ ಛಾಯಾಗ್ರಾಹಕರು ಛಾಯಾಗ್ರಹಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಿಡಿಯೊ ಚಿತ್ರೀಕರಣ ನಡೆಸುವುದನ್ನು ನಿರ್ಬಂಧಿಸಿ ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು.
ಕಾರಿಡಾರ್‌ಗಳಲ್ಲಿ ವಿಡಿಯೊ ಚಿತ್ರೀಕರಣ ಮತ್ತು ಪತ್ರಿಕಾ ಛಾಯಾಗ್ರಹಣ ಮಾಡುತ್ತಿದ್ದು, ಇದರಿಂದ ಹಲವಾರು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಸುತ್ತೋಲೆಯಲ್ಲಿ ಸಮರ್ಥನೆ ನೀಡಲಾಗಿತ್ತು.
ಸುಗಮ ಚಲನೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಯವರು ಮತ್ತು ಇತರ ಸಚಿವರಿಂದ ಹೇಳಿಕೆ ಪಡೆಯಲು ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಸಚಿವಾಲಯದ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಆದೇಶ ಹಿಂಪಡೆಯದಿದ್ದರೆ ಎಲ್ಲಾ ಸರ್ಕಾರಿ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿಗಳ ಕಾರ್ಯಕ್ರಮ ಬಾಯ್ಕಾಟ್ ಮಾಡಲು ಮಾಧ್ಯಮ ಪ್ರತಿನಿಧಿಗಳು ತೀರ್ಮಾನಿಸಿದ್ದರು. ಆ ಹಿನ್ನೆಲೆಯಲ್ಲಿ, ಇದೀಗ ವಿಧಾನಸೌಧದ ಕಾರಿಡಾರ್ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ಹಿಂಪಡೆಯಲು ಮುಖ್ಯಮಂತ್ರಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.