ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೂ ಶೀಘ್ರದಲ್ಲೇ ವಿಮಾ ಸೌಲಭ್ಯ ಸಾಧ್ಯತೆ

ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೂ ‘ಜ್ಯೋತಿ ಸಂಜೀವಿನಿ’ ಯೋಜನೆ ಅಡಿಯಲ್ಲಿ ವಿಮಾ ಸೌಲಭ್ಯ ನೀಡುವ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಭರವಸೆ ನೀಡಿದ್ದಾರೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೂ ‘ಜ್ಯೋತಿ ಸಂಜೀವಿನಿ’ ಯೋಜನೆ ಅಡಿಯಲ್ಲಿ ವಿಮಾ ಸೌಲಭ್ಯ ನೀಡುವ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಭರವಸೆ ನೀಡಿದ್ದಾರೆ. 

ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸ್ಟಾಫ್‌ ನರ್ಸ್‌ಗಳೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನರ್ಸ್‌ಗಳಿಗೆ ಧೈರ್ಯತುಂಬಿದರು.

ವಿಡಿಯೋ ಕಾನ್ಫರೆನ್ಸ್ ವೇಳೆ ದಾದಿಯರು ಅಗತ್ಯ ಇರುವ ವೈದ್ಯಕೀಯ ಸಂಪನ್ಮೂಲಗಳು, ಲಸಿಕೆ ಕೊರತೆ, ಉತ್ತಮ ಸಿಬ್ಬಂದಿಗಳು ಹಾಗೂ ಸರ್ಕಾರ ಬೆಂಬಲವನ್ನು ಕೋರಿದರು. 

6-7 ಜಿಲ್ಲೆಗಳ ನರ್ಸ್ ಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರ ಸಮರ್ಪಣಾ ಭಾವವನ್ನು ಶ್ಲಾಘಿಸಿದ್ದೇನೆ. ಕರ್ತವ್ಯ ವೇಳೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಕೆಲವರು ಕೊರೋನಾ ಸೋಂಕಿನಿಂದ ಗುಣಮುಖರಾದ ಕೂಡಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕುಟುಂಬ ಸದಸ್ಯರು ಕೊರೋನಾ ಸೋಂಕಿಗೊಳಗಾಗಿದ್ದರೂ, ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇಂತಹವರಿಗೆ ಧನ್ಯವಾದ ಹೇಳಲು ಪದಗಳೂ ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. 

ರಾಜ್ಯದಲ್ಲಿ 21,574 ಮಂದಿ ಸ್ಟಾಫ್‌ ನರ್ಸ್‌ಗಳಿದ್ದಾರೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿ ಅವರ ಸೇವೆ ಶ್ಲಾಘನೀಯವಾದುದು. ಎಲ್ಲ ನರ್ಸ್‌ಗಳಿಗೂ ಮಾಸಿಕ ರೂ. 8,000 ಕೋವಿಡ್‌ ವಿಶೇಷ ಭತ್ಯೆ ನೀಡಲಾಗುತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಸ್ಟಾಫ್‌ ನರ್ಸ್‌ಗಳ ಕುಟುಂಬಗಳಿಗೆ ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ವಿಮೆ’ ಯೋಜನೆಯಡಿ ತಲಾ ರೂ.50 ಲಕ್ಷ ಪರಿಹಾರ ನೀಡಲಾಗುವುದು. ಆರು ಅರ್ಜಿಗಳು ಸ್ವೀಕೃತವಾಗಿದ್ದು, ಮೂರು ಪ್ರಕರಣಗಳಲ್ಲಿ ಪರಿಹಾರ ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ವೇಳೆ ನರ್ಸ್‌ಗಳ ಕುಟುಂಬದ ಸದಸ್ಯರಿಗೂ ಸರ್ಕಾರದಿಂದ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವಂತೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ವಹೀದಾ ಮನವಿ ಮಾಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿಗೂ ‘ಜ್ಯೋತಿ ಸಂಜೀವಿನಿ’ ಯೋಜನೆ ಸೌಲಭ್ಯ ನೀಡುವಂತೆ ರಾಯಚೂರು ವೈದ್ಯಕೀಯ ಕಾಲೇಜಿನ ರಾಚೋಟಿ ವಾರದ ಆಗ್ರಹಿಸಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಎರಡೂ ವಿಷಯಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com