ಬೆಡ್'ಗೂ ಕ್ಯೂ ಸಿಸ್ಟಮ್: ವಿನೂತನ ವ್ಯವಸ್ಥೆಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ
ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಬಿಬಿಎಂಪಿಯಿಂದಲೇ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ. ಬೆಡ್ ಬ್ಲಾಕ್ ಮಾಡುವ ದಂಧೆಗೆ ಇದರಿಂದ ಕಡಿವಾಣ ಬೀಳಲಿದೆ ಎಂದು ಸಚಿವ ಅರವಿಂದ ಲಿಂಬಾವಳಿಯವರು ಹೇಳಿದ್ದಾರೆ.
Published: 11th June 2021 07:40 AM | Last Updated: 11th June 2021 12:44 PM | A+A A-

ಕೆಂಪೇಗೌಡ ಬಸ್ ನಿಲ್ದಾಣ
ಬೆಂಗಳೂರು: ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಬಿಬಿಎಂಪಿಯಿಂದಲೇ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ. ಬೆಡ್ ಬ್ಲಾಕ್ ಮಾಡುವ ದಂಧೆಗೆ ಇದರಿಂದ ಕಡಿವಾಣ ಬೀಳಲಿದೆ ಎಂದು ಸಚಿವ ಅರವಿಂದ ಲಿಂಬಾವಳಿಯವರು ಹೇಳಿದ್ದಾರೆ.
ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೊದಲಿಗೆ ಈ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿದ್ದು, ನಂತರ ರಾಜ್ಯಾದಾದ್ಯಂತ ಇದೇ ಪದ್ಧತೆ ಅನುಸರಿಸಲಾಗುವುದು. ದೇಶದ ಬೇರೆ ಯಾವ ಭಾಗದಲ್ಲಿಯೂ ಇಂತಹ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹೊಸ ಪದ್ಧತಿ 3ನೇ ಅಲೆಗೆ ಅತ್ಯಂತ ಸಹಕಾರಿಯಾಗಲಿದೆ. ಟ್ರಯಾಜಿಂಗ್ ಕ್ಯೂ ಮತ್ತು ಟ್ಯಯಾಜಿಂಗ್ ಆದ ನಂತರದ ಬೆಡ್ ಕ್ಯೂ ಸಿಸ್ಟಮ್ ಇದರಲ್ಲಿದೆ. ಸಾರ್ವಜನಿಕರಿಗೆ ಈ ಮಾಹಿತಿ ಪ್ರತಿ ದಿನವೂ ವೆಬ್ ಸೈಟ್ ನಲ್ಲಿ ಸಿಗಲಿದೆ. ಪರಿಸ್ಥಿತಿ ಗಂಭೀರವಾಗಿರುವ ರೋಗಿಗಳಿಗೆ ಸೆಂಟರ್ ಬೆಡ್ ಸಿಸ್ಟಮ್ ನಿಂದ ಬೆಡ್ ನೀಡಲು ಅವಕಾಶವಿದೆ. ಪಾರದರ್ಶಕ ಮತ್ತು ಪರಿಣಾಕಾರಿಯಾಗಿ ನಿರ್ವಹಣೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಕ್ಯೂಯಿಂಗ್ ವ್ಯವಸ್ಥೆಯಿಂದ ಆಸ್ಪತ್ರೆ ಪ್ರವೇಶ ಪಡೆಯಲು ಬಯಸುವ ಎಲ್ಲಾ ರೋಗಿಗಳು ಟ್ರಯಾಜ್ ವಿವರಗಳನ್ನು ಎಲೆಕ್ಟ್ರಾನಿಕ್ ಪದ್ಧತಿ ಮೂಲಕ ದಾಖಲಿಸಲಾಗುತ್ತದೆ. ಕ್ಲಿನಿಕಲ್ ಪರಿಸ್ಥಿತಿಗಳ ಆಧಾರದ ಮೇಲೆ ಸೋಂಕಿತರಿಗೆ ಆಸ್ಪತ್ರೆ/ಸಿಸಿಸಿ ಹಾಸಿಗೆಯನ್ನು ಶಿಫಾರಸು ಮಾಡಲಾಗುವುದು. ರೋಗಿಗಳಿಗೆ ನಿರ್ದಿಷ್ಟ ಹಾಸಿಗೆ ಮತ್ತು ವಲಯದ ಪ್ರಕಾರ ಕ್ಯೂ ಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಚಿಕಿತ್ಸೆಯ ಸಮಯದ ಆಧಾರದ ಮೇಲೆ ಕ್ಯೂ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ನಿಯೋಜಿಸಲಾಗುವುದು ಎಂದು ತಿಳಿಸಿದರು.