ಚಾಮರಾಜನಗರ ಆಸ್ಪತ್ರೆ ದುರಂತ ತನಿಖೆಗೆ ನಿವೃತ್ತ ನ್ಯಾ. ಬಿ.ಎ.ಪಾಟೀಲ್ ನೇಮಕ: ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ 24 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ಬಿ ಎ ಪಾಟೀಲ್ ಅವರ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಿದೆ.
Published: 05th May 2021 02:40 PM | Last Updated: 05th May 2021 03:21 PM | A+A A-

ಹೈಕೋರ್ಟ್
ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ 24 ಕೋವಿಡ್ ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ಬಿ ಎ ಪಾಟೀಲ್ ಅವರ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟ ಘಟನೆಯ ಸಂದರ್ಭ, ಸಾಧ್ಯತೆಗಳ ಬಗ್ಗೆ ಸಮಗ್ರ ತನಿಖೆ ಮಾಡಲು ತನಿಖಾ ಆಯೋಗವನ್ನು ನೇಮಿಸುವುದು ಅಗತ್ಯ ಎಂದು ಮನಗಂಡು 1952ರ ತನಿಖಾ ಕಾಯ್ದೆಯ ಸೆಕ್ಷನ್ 3ರಡಿಯಲ್ಲಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾ. ಬಿ ಎ.ಪಾಟೀಲ್ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.
Govt appoints Justice BA Patil to inquire patients death in #Chamarajanagar. @NewIndianXpress @XpressBengaluru @santwana99 @DChamarajanagar @DC_Mysuru @DHFWKA @mla_sudhakar @CEO_chanagar @CMofKarnataka @NammaBengaluroo @NammaKarnataka_ @INCKarnataka @JanataDal_S @BJP4Karnataka pic.twitter.com/PXcWGvnqXR
— Bosky Khanna (@BoskyKhanna) May 5, 2021
ಹೈಕೋರ್ಟ್ ಅಸಮಾಧಾನ: ಚಾಮರಾಜನಗರ ಆಸ್ಪತ್ರೆಯ ದುರಂತ ತನಿಖೆಗೆ ತನ್ನಷ್ಟಕ್ಕೇ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗವನ್ನು ಸರ್ಕಾರ ನೇಮಿಸಿರುವ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ಹೈಕೋರ್ಟ್ ಕಲಾಪದ ವಿಶೇಷ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ ಪ್ರಕರಣವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡುವ ಕೆಲಸವನ್ನು ಹೈಕೋರ್ಟ್ ಗೆ ಬಿಡಬೇಕಾಗಿತ್ತು, ನ್ಯಾಯಮೂರ್ತಿ ಬಿ ಎ ಪಾಟೀಲ್ ಅವರನ್ನು ನೇಮಕ ಮಾಡಿದ್ದಕ್ಕೆ ನಮ್ಮ ವಿರೋಧವಲ್ಲ, ಸರ್ಕಾರದ ನಡೆ ನಮಗೆ ಸರಿ ಎನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರದ ಪರ ವಕೀಲ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ, ಸರ್ಕಾರದ ಆದೇಶದಲ್ಲಿ ಕೆಲವು ತಿದ್ದುಪಡಿಗಳಿದ್ದು, ಮಧ್ಯಾಹ್ನ ಮೇಲೆ ಮತ್ತೆ ಸರ್ಕಾರದ ಸೂಚನೆಯೊಂದಿಗೆ ಬರುವುದಾಗಿ ಹೇಳಿದರು.
ನಿನ್ನೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖಾ ಕಾಯ್ದೆಯಡಿ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತದ ಬಗ್ಗೆ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗವನ್ನು ಸರ್ಕಾರ ನೇಮಿಸುವುದು ಸೂಕ್ತ ಎಂದು ಹೇಳಿತ್ತು.
ಇದೇ ಸಂದರ್ಭದಲ್ಲಿ ಹೈಕೋರ್ಟ್, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ಹಗರಣ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿಕ್ರಿಯೆ ಕೇಳಿದೆ.