ಬೋಯಿಂಗ್ ಇಂಡಿಯಾ ಸಂಸ್ಥೆಯಿಂದ ಕಲಬುರಗಿಯಲ್ಲಿ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪನೆ: ಮುರುಗೇಶ್ ನಿರಾಣಿ

ಕೋವಿಡ್ ಎರಡನೇ ಅಲೆಯಿಂದ ರಾಜ್ಯದಲ್ಲಿ ಸೃಷ್ಠಿಯಾಗಿರುವ ಆಕ್ಸಿಜನ್ ಬೆಡ್ ಕೊರತೆ ನಿವಾರಣೆಗೆ ಬೋಯಿಂಗ್ ಇಂಡಿಯಾ ಸಂಸ್ಥೆ ಮುಂದಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿ....

Published: 08th May 2021 07:29 PM  |   Last Updated: 08th May 2021 07:29 PM   |  A+A-


murugesh nirani

ಮುರುಗೇಶ್ ನಿರಾಣಿ

Posted By : Lingaraj Badiger
Source : UNI

ಕಲಬುರಗಿ: ಕೋವಿಡ್ ಎರಡನೇ ಅಲೆಯಿಂದ ರಾಜ್ಯದಲ್ಲಿ ಸೃಷ್ಠಿಯಾಗಿರುವ ಆಕ್ಸಿಜನ್ ಬೆಡ್ ಕೊರತೆ ನಿವಾರಣೆಗೆ ಬೋಯಿಂಗ್ ಇಂಡಿಯಾ ಸಂಸ್ಥೆ ಮುಂದಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿ ನೀಡಿದ್ದೇನೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ನಗರದ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದೇ ಸಂಸ್ಥೆಯಿಂದ ಬೆಂಗಳೂರಿನ ಯಲಹಂಕದಲ್ಲಿಯೂ 200 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸುತ್ತಿದೆ ಎಂದರು.

ಪ್ರಸ್ತುತ ಜಿಲ್ಲೆಗೆ 30 ಕೆ.ಎಲ್. ಆಕ್ಸಿಜನ್ ಅವಶ್ಯಕತೆವಿದೆ. ಜಿಲ್ಲೆಗೆ ವಿವಿಧ ಮೂಲಗಳಿಂದ ಆಕ್ಸಿಜನ್ ಲಭ್ಯವಿದೆಯಾದರು ಆಮದು ಮಾಡಿಕೊಳ್ಳಲು ಆಕ್ಸಿಜನ್ ತುಂಬಿಕೊಂಡು ಬರುವ ಆಕ್ಸಿಜನ್ ಕಂಟೇನರ್ ಇಲ್ಲದಿರುವುದು ತೊಂದರೆಗೀಡು ಮಾಡಿದೆ. ಹೊಸ ಆಕ್ಸಿಜನ್ ಟ್ಯಾಂಕರ್ ಗಳು ಈಗಾಗಲೇ ಬಳ್ಳಾರಿ ಜಿಲ್ಲೆಗೆ ಬಂದಿದ್ದು, ಇನ್ನೆರಡು ದಿನಗಳ ಈ ಆಕ್ಸಿಜನ್ ಟ್ಯಾಂಕರ್ ಗಳು ಜಿಲ್ಲೆಗೆ ಬರಲಿವೆ ಎಂದು ಹೇಳಿದರು.
 
ಆಕ್ಸಿಜನ್ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಪ್ರಾಯೋಗಿಕವಾಗಿ ಜಿಲ್ಲೆಗೆ 100 ಆಕ್ಸಿಜನ್ ಕನ್ಸಟ್ರೇಟರ್ ಖರೀದಿಸಿದ್ದು, ಇದೇ ಸೋಮವಾರ ಕಲಬುರಗಿಗೆ ತಲುಪಲಿವೆ. ತಲಾ ಇಬ್ಬರು ರೋಗಿಗಳಿಗೆ ಒಂದು ಕನ್ಸನ್ಟ್ರೇಟರ್ ದಿಂದ ಅಕ್ಸಿಜನ್ ಪೂರೈಸಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕನ್ಸನ್ ಟ್ರೇಟರ್ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರದಿಂದಲೂ 3000 ಆಕ್ಸಿಜನ್ ಕನ್ಸನ್ ಟ್ರೇಟರ್ ಬರಲಿವೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1600 ಕೋವಿಡ್ ಬೆಡ್ ಗಳಿವೆ. ಜಿಲ್ಲೆಯಲ್ಲಿನ ಸಕ್ರಿಯ ಸೋಂಕಿತರ ಪೈಕಿ ಆಕ್ಸಿಜನ್ ಬೆಡ್ ಮೇಲೆ 440 ಮತ್ತು ಐಸಿಯುನಲ್ಲಿ 378 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌಮ್ಯ ಲಕ್ಷಣದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಮ್ಸ್ ಬಳಿಯಿರುವ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಶನಿವಾರ ಬೆಳಗ್ಗೆ ಜಿಲ್ಲೆಗೆ 200 ವಯಲ್ ರೆಮ್ಡಿಸಿವಿಯರ್ ಇಂಜೆಕ್ಷನ್ ಬಂದಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಇಂಜೆಕ್ಷನ್ ಒದಗಿಸಲು ಸರ್ಕಾರ ಭರವಸೆ ನೀಡಿದೆ ಎಂದರು.

ದೇಶದಲ್ಲಿ ಈ ಹಿಂದೆ ರೆಮಿಡಿಸಿವರ್ ಉತ್ಪಾದನೆಗೆ ಕೇವಲ ಎರಡು ಕಡೆ ಅನುಮತಿ ನೀಡಲಾಗಿತ್ತು. ಇತ್ತೀಚಿಗೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ರೆಮಿಡಿಸಿವಿರ್ ಇಂಜೆಕ್ಷನ್ ಗೆ ಹೆಚ್ಚಿನ ಬೇಡಿಕೆ ಬಂದ ಕಾರಣ ದೇಶದಾದ್ಯಂತ 20 ಕಡೆ ರೆಮ್ಡಿಸಿವಿಯರ್ ಇಂಜೆಕ್ಷನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಇದರಲ್ಲಿ ರಾಜ್ಯದ ಮುಧೋಳ ಮತ್ತು ಬೆಳಗಾವಿಯ ಅನಂದ ಫಾರ್ಮಾ ಸಂಸ್ಥೆಯ ಎರಡು ಯುನಿಟ್ ಗಳು ಸೇರಿವೆ. ಈ ಘಟಕಗಳು ಮೇ 17 ರಿಂದ ಉತ್ಪಾದನೆ ಆರಂಭಿಸಲಿದ್ದು, ರಾಜ್ಯದಲ್ಲಿ ರೆಮಿಡಿಸಿವಿರ್ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್ ಸೇವೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಸ್ಕ್ಯಾನ್ ಗೆ ಬರುವ ರೋಗಿಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಚ್ಚಿನ ದರ ವಿಧಿಸುವ ಆಸ್ಪತ್ರೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಅವರ ಸಂಬಂಧಿಕರು ಅಥವಾ ಕುಟುಂಬದವರು ಮನೆಯಿಂದ ಮಾಡಿದ ಆಹಾರವನ್ನು ತಲುಪಿಸಲು ಆಸ್ಪತ್ರೆಯಲ್ಲಿ ಒಂದು ಸಮಯ ನಿಗದಿ ಮಾಡಲಾಗುವುದು. ಈ ಕುರಿತು ಚರ್ಚೆ ನಡೆಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ  ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಮತ್ತಿತರಿದ್ದರು.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp