ಚಾಮರಾಜನಗರ ದುರಂತ ಬಳಿಕ ಹೆಚ್ಚಿದ ಆತಂಕ: ಮೈಸೂರು- ನೆರೆ ಜಿಲ್ಲೆಗಳ ನಡುವೆ 'ಆಕ್ಸಿಜನ್ ವಾರ್'!

ಆಕ್ಸಿಜನ್ ಹಂಚಿಕೆ ಕುರಿತು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟ ನ್ಯಾಯಾಲಯದ ಮೆಟ್ಟೇಲಿರಿದ್ದು, ಇದರ ನಡುವೆಯೇ ಮೈಸೂರು ಹಾಗೂ ನೆರೆ ಜಿಲ್ಲೆಗಳ ನಡುವೆಯೂ ಹೋರಾಟಗಳು ಆರಂಭವಾಗಿವೆ. 
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ

ಮೈಸೂರು: ಆಕ್ಸಿಜನ್ ಹಂಚಿಕೆ ಕುರಿತು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟ ನ್ಯಾಯಾಲಯದ ಮೆಟ್ಟೇಲಿರಿದ್ದು, ಇದರ ನಡುವೆಯೇ ಮೈಸೂರು ಹಾಗೂ ನೆರೆ ಜಿಲ್ಲೆಗಳ ನಡುವೆಯೂ ಹೋರಾಟಗಳು ಆರಂಭವಾಗಿವೆ. 

ಚಾಮರಾಜನಗರ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಬಳಿಕ ಭೀತಿಗೊಳಗಾಗಿರುವ ಇತರೆ ಜಿಲ್ಲೆಗಳ ಸಚಿವರು ಹಾಗೂ ಅಧಿಕಾರಿಗಳು ಇದೀಗ ತಮ್ಮ ಜಿಲ್ಲೆಯಲ್ಲಿ ಅಂತಹ ಘಟನೆಗಳು ಸಂಭವಿಸಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. 

ಇದರಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಸ್ವತಃ ಮೈಸೂರಿಗೆ ಭೇಟಿ ನೀಡಿದ್ದು, ಈ ವೇಳೆ ಬಲವಂತವಾಗಿ 350 ಅಕ್ಸಿಜನ್ ಸಿಲಿಂಡರ್'ನ್ನು ಹೊತ್ತೊಯ್ದಿದ್ದಾರೆಂದು ಹೇಳಲಾಗುತ್ತಿದೆ. ಇದೇ ರೀತಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹಾಗೂ ಡಿಸಿ ಮೈಸೂರಿಗೆ ಭೇಟಿ ನೀಡಿ ಅಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ.

ಈ ಬೆಳವಣಿಗೆಗಳಿಗೆ ಮೈಸೂರು ಶಾಸಕ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಂಡ್ಯ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು 350 ಆಕ್ಸಿಜನ್ ಸಿಲಿಂಡರನ್ನು ಬಲವಂತವಾಗಿ ತೆಗೆದುಕೊಂಡು ಹೋದ ವಿಚಾರ ತಿಳಿದು ಬಂದಿದೆ. ಚಾಮರಾಜನಗರ ಮತ್ತು ಮಂಡ್ಯ ಉಸ್ತುವಾರಿ ಸಚಿವರೇ ಬಂದು ಸಿಲಿಂಡರ್ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಈಗ ಮೈಸೂರಿನ ಮೇಲೆ ದಬ್ಬಾಳಿಕೆ ಮಾಡುವ ಪರಿಸ್ಥಿತಿ ನಡೆಯುತ್ತಿದೆ. ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಎಂಬುದನ್ನು ಸಿಎಂ ಬಳಿ ಮಾತನಾಡಿಕೊಳ್ಳಿ. ಬೆದರಿಸಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ನಾವು ಈಗಾಗಲೇ ಅಕ್ಕಪಕ್ಕದ ಜಿಲ್ಲೆಗೆ ಪ್ರೀತಿಯಿಂದ ಆಕ್ರಿಜನ್ ಸಿಲಿಂಡರ್ ಕೊಡುತ್ತಿದ್ದೇವೆ. ಅದನ್ನು ಬಿಟ್ಟು ಪೊಲೀಸ್ ಜೀಪ್ ಜೊತೆಗೆ ವಾಹನ ತಂದು ತುಂಬಿಕೊಂಡು ಹೋಗೋದಲ್ಲ. ಚಾಮರಾಜನಗರದ ಘಟನೆ ಹೇಳಿ ಅನಗತ್ಯ ಗೊಂದಲ, ದಬ್ಬಾಳಿಕೆ ಮಾಡಬೇಡಿ. ಜಿಲ್ಲಾಧಿಕಾರಿಯನ್ನು ಕರೆದುಕೊಂಡು ಬಂದು ಸಚಿವರು ಸಿಲಿಂಡರ್ ತುಂಬಿಸಿಕೊಳ್ಳುವ ಕೆಲಸ ಆಗುತ್ತಿದೆ. ಮೊದಲು ಈ ಕೆಲಸ ಮಾಡುವುದನ್ನು ಬಿಡಿ. ನಾವು ಈಗಾಗಲೇ ಕೊರತೆ ವಾತಾವರಣ ಎದುರಿಸುತ್ತಿದ್ದೇವೆ. ನಾವೇ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ. ಎರಡು ಜಿಲ್ಲೆಯ ಉಸ್ತುವಾರಿ ಸಚಿವರು ಆಕ್ಸಿಜನ್ ಗಾಗಿ ಮೈಸೂರಿಗೆ ಬಂದು ಹೋಗುವುದು ಸರಿಯಲ್ಲ. ನೀವೂ ಮೈಸೂರು ಜಿಲ್ಲೆಯನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು. 

ಜನರಲ್ಲಿ ಮೈಸೂರಿನ ಬಗ್ಗೆ ತಪ್ಪು ಅಭಿಪ್ರಾಯ ಬರುವಂತಹ ಕೆಲಸ ಮಾಡಬೇಡಿ. ಸಹಾಯ ಅಂತ ಅಂದ್ರೆ ಮೈಸೂರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನೀವು ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದರು. 

ಆಕ್ಸಿಜನ್ ಸರಬರಾಜು ವಿಚಾರದಲ್ಲಿ ನೂತನ ಕ್ರಮಕ್ಕೆ ಮುಂದಾದ ಸಂಸದ ಪ್ರತಾಪ ಸಿಂಹ, ಆಕ್ಸಿಜನ್ ಸರಬರಾಜು ಏಜೆನ್ಸಿಗಳ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಿದ್ದಾರೆ. ಒಟ್ಟು 8 ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದು, ಕ್ಯಾಮರಾಗಳನ್ನು ಪೂರೈಸಲಾಗಿದೆ. 4 ಏಜೆನ್ಸಿ ಗಳಲ್ಲಿ ತಲಾ ಎರಡು ಕ್ಯಾಮೆರಾ 24*7 ಮೊಬೈಲ್ ಮೂಲಕ ಮಾನಿಟರ್ ಮಾಡಲಾಗುತ್ತಿದೆ. ಮೈಸೂರಿನ ಆಸ್ಪತ್ರೆಗಳಿಗೆ ಕೋಟಾ ನಿಗದಿಪಡಿಸಿದ್ದು, ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com