48 ದಿನಗಳಲ್ಲಿ 16 ನ್ಯಾಯಾಂಗ ಸಿಬ್ಬಂದಿ, 190 ವಕೀಲರು ಕೋವಿಡ್ ಗೆ ಬಲಿ: ಕರ್ನಾಟಕ ಹೈಕೋರ್ಟ್

ಕಳೆದ 48 ದಿನಗಳಲ್ಲಿ ಕೊರೋನಾ ಎರಡನೇ ಅಲೆಗೆ ನ್ಯಾಯಾಂಗದ 16 ಸಿಬ್ಬಂದಿ ಮತ್ತು 190 ವಕೀಲರು ಬಲಿಯಾಗಿರುವುದು ದುರಾದೃಷ್ಟಕರ ಎಂದು ಕರ್ನಾಟಕ ಹೈಕೋರ್ಟ್ ಬೇಸರ ವ್ಯಕ್ತ ಪಡಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕಳೆದ 48 ದಿನಗಳಲ್ಲಿ ಕೊರೋನಾ ಎರಡನೇ ಅಲೆಗೆ ನ್ಯಾಯಾಂಗದ 16 ಸಿಬ್ಬಂದಿ ಮತ್ತು 190 ವಕೀಲರು ಬಲಿಯಾಗಿರುವುದು ದುರಾದೃಷ್ಟಕರ ಎಂದು ಕರ್ನಾಟಕ ಹೈಕೋರ್ಟ್ ಬೇಸರ ವ್ಯಕ್ತ ಪಡಿಸಿದೆ.

ಬೆಂಗಳೂರಿನ ಅಡ್ವೊಕೇಟ್ಸ್ ಅಸೋಸಿಯೇಷನ್ (ಎಎಬಿ) ಭಾನುವಾರ ಆಯೋಜಿಸಿದ್ದ ಮೂರನೇ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ, ಈ ಸಮಯದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನ್ಯಾಯಾಂಗದ ಸದಸ್ಯರು ಸೈನಿಕರಂತೆ ವರ್ತಿಸಬೇಕು ಮತ್ತು ಕೋವಿಡ್  ಅನ್ನು ಎದುರಿಸಲು ತಮ್ಮದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ನಾನು ಇದನ್ನು ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೇಳಿದ್ದೇನೆ. ಬಾರ್‌ನ ಸದಸ್ಯರು ಯುದ್ಧಭೂಮಿಯಲ್ಲಿರುವಂತೆ ಹೋರಾಡಬೇಕು. ನಾವು ಮೊದಲ ಅಲೆಯಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಎರಡನೇ ಅಲೆಯಲ್ಲಿಯೂ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಕೊರೋನಾ ಎರಡನೇ ಅಲೆಗೆ ಹೋಲಿಸಿದರೆ ಮೊದಲ ಅಲೆಯ ಪ್ರಭಾವ ಕಡಿಮೆ ಎಂದು ಪ್ರಸ್ತಾಪಿಸಿದ ಅವರು, 2021 ರ ಏಪ್ರಿಲ್ 1 ರಿಂದ ಮೇ 18 ರವರೆಗೆ ನ್ಯಾಯಾಂಗದ 616 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದು ಅದರಲ್ಲಿ  16 ಮಂದಿ ಕೋವಿಡ್- 19 ಕ್ಕೆ ಬಲಿಯಾದರು. ರಾಜ್ಯಾದ್ಯಂತ 190 ವಕೀಲರು ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಕೊಳ್ಳುವುದು ವಿಷಾದನೀಯ. ಈ ಅವಧಿಯಲ್ಲಿ 90 ನ್ಯಾಯಾಂಗ ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ, ಆದರೆ ಅದೃಷ್ಟವಶಾತ್, ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ, ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಬಂದ ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಲು ಸರ್ಕಾರ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬಾರ್ ಸದಸ್ಯರಿಗೆ ನಾವು 24/7 ಇಲ್ಲಿದ್ದೇವೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಸಾಂಕ್ರಾಮಿಕ ಸಮಯದಲ್ಲಿ ನ್ಯಾಯಾಲಯಗಳ ಸುಗಮ ಮತ್ತು ಸುರಕ್ಷಿತ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯ ನ್ಯಾಯಮೂರ್ತಿ ಓಕಾ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com