The New Indian Express
ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ಶಾಸಕ ಪಾಪರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಘಟನೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪಾಪರೆಡ್ಡಿ, ಆತ ಪೊಲೀಸ್ ಸಿಬ್ಬಂದಿ ಎಂದು ತಿಳಿದಿರಲಿಲ್ಲ. ಮಫ್ತಿಯಲ್ಲಿರುವ ಪೊಲೀಸರು ಧರಣಿಯಲ್ಲಿ ಭಾಗಿಯಾಗಿರುವ ಬಿಜೆಪಿ ಕಾರ್ಯಕರ್ತನಿರಬಹುದು ಎಂದು ಭಾವಿಸಿದ್ದೆ. ಸಾದಾ ಬಟ್ಟೆಯಲ್ಲಿದ್ದ ಅವರು ನಮ್ಮ ಕಾರ್ಯಕರ್ತ ಎಂದುಕೊಂಡಿದ್ದೆ. ಬಿಜೆಪಿ ಧ್ವಜ ಹಿಡಿದು ಪ್ರತಿಭಟನಾ ಸ್ಥಳದಿಂದ ಪ್ರತಿಮೆಯನ್ನು ತೆಗೆದುಕೊಂಡು ಹೋಗಿದ್ದರು ಎಂದು ಪಾಪರೆಡ್ಡಿ ತಿಳಿಸಿದ್ದಾರೆ.
ಕ್ಷಮೆ ಯಾಚನೆಗೆ ನಿರಾಕರಿಸಿದ ನಾಯಕ
ಅಂತೆಯೇ ಪೇದೆಯ ಕ್ಷಮೆ ಯಾಚಿಸಲು ನಿರಾಕರಿಸಿದ ಪಾಪಾರೆಡ್ಡಿ, ಬದಲಿಗೆ ಬಿಜೆಪಿಯ ಪ್ರತಿಭಟನೆಯಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 'ಕಾಂಗ್ರೆಸ್ ಕಾರ್ಯಕರ್ತರು ಹಲವು ಬಾರಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂಭಾಗದಲ್ಲಿ ಅವರ ಪ್ರತಿಕೃತಿ ದಹಿಸಿದರು. ಆಗ ಅದನ್ನು ಮಾಡದಂತೆ ಪೊಲೀಸರು ಏಕೆ ತಡೆಯಲಿಲ್ಲ? ಸಿದ್ದರಾಮಯ್ಯನವರ ಮೇಲೆ ಇವರಿಗೆ ಯಾಕೆ ಇಷ್ಟು ಪ್ರೀತಿ' ಎಂದು ಪಾಪರೆಡ್ಡಿ ಪ್ರಶ್ನಿಸಿದರು.
ಏನಿದು ಘಟನೆ?
ದಲಿತರ ಕುರಿತು ಅವಳನೇಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಲು ಮುಂದಾಗಿದ್ದರು. ಆದರೆ, ಪೊಲೀಸರು ಪ್ರತಿಕೃತಿ ದಹಿಸಲು ಅವಕಾಶ ನೀಡಲಿಲ್ಲ. ಆಗ ಮಾಜಿ ಶಾಸಕ ಪಾಪಾರೆಡ್ಡಿ ಮತ್ತು ಪ್ರತಿಭಟನಾನಿರತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಗೆ ಕಪಾಳ ಮೋಕ್ಷ: ಬಿಜೆಪಿ ಮಾಜಿ ಶಾಸಕನ ವಿರುದ್ಧ ಪ್ರಕರಣ ದಾಖಲು!
ಆ ವೇಳೆ ಪ್ರತಿಕೃತಿಯನ್ನು ಪೊಲೀಸ್ ಸಿಬ್ಬಂದಿ ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆಗ ಪಾಪಾರೆಡ್ಡಿ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರು ಪ್ರತಿಕೃತಿಗೆ ಬೆಂಕಿ ಹಚ್ಚುವುದನ್ನು ತಡೆಯಲು ಮುಂದಾದರೂ ಕೊನೆಗೂ ಪ್ರತಿಕೃತಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಮಾಜಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪೊಲೀಸರು ಮಾಜಿ ಬಿಜೆಪಿ ಶಾಸಕ ಪಾಪರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಎಲ್ಲಿಯೂ ದಲಿತರನ್ನು ಅಗೌರವಿಸುವ ಮಾತು ಆಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಈ ಬಗ್ಗೆ ರಾಯಚೂರು ಎಸ್ ಪಿ ನಿಖಿಲ್ ಬಿ ಅವರು ಮಾಹಿತಿ ನೀಡಿದ್ದು, ಬುಧವಾರ ಸಿವಿಲ್ ಡ್ರೆಸ್ ನಲ್ಲಿದ್ದ ಕಾನ್‌ಸ್ಟೆಬಲ್ ರಾಘವೇಂದ್ರ ಮೇಲೆ ಪಾಪರೆಡ್ಡಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಕ್ಷ್ಯವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರ ಅಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.