ಭಾನುವಾರ ಒಂದೇ ದಿನ 1 ಲಕ್ಷಕ್ಕೂ ಅಧಿಕ ಮಂದಿ ಪುನೀತ್ ಸಮಾಧಿಗೆ ಭೇಟಿ: ಅಭಿಮಾನಕ್ಕೆ ಧನ್ಯವಾದ ಎಂದ ರಾಘಣ್ಣ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವಾರ ಕಳೆದರೂ ಅವರ ಸಮಾಧಿ ದರ್ಶನಕ್ಕೆ ಕಂಠೀರವ ಸ್ಟುಡಿಯೋಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳ ದಂಡೇ ಹರಿದುಬರುತ್ತಿದ್ದು, ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ
Published: 06th November 2021 07:47 PM | Last Updated: 06th November 2021 07:53 PM | A+A A-

ಕಂಠೀರವ ಸ್ಟುಡಿಯೋ ಬಳಿ ಇರುವ ಅಭಿಮಾನಿಗಳು ಹಾಗೂ ರಾಘವೇಂದ್ರ ರಾಜ್ ಕುಮಾರ್ ಚಿತ್ರ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವಾರ ಕಳೆದರೂ ಅವರ ಸಮಾಧಿ ದರ್ಶನಕ್ಕೆ ಕಂಠೀರವ ಸ್ಟುಡಿಯೋಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳ ದಂಡೇ ಹರಿದುಬರುತ್ತಿದ್ದು, ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಭಾನುವಾರ ಒಂದೇ ದಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಈ ಕುರಿತ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್, ಅಪ್ಪು ನೋಡಲು ಅಭಿಮಾನಿಗಳ ಸಾಗರವೇ ಬರುತ್ತಿದೆ. ನಿನ್ನೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಮಂದಿ ಬಿಸಿಲು ಹಾಗೂ ಮಳೆ ಏನನ್ನೂ ಲೆಕ್ಕಿಸದೆ ನೋಡಲು ಬಂದಿದ್ದಾರೆ. ನಿಮ್ಮ ಅಭಿಮಾನಕ್ಕೆ ಧನ್ಯವಾದ ಎಂದಿದ್ದಾರೆ.
ಅಪ್ಪುನ ನೋಡಲು ಅಭಿಮಾನಿಗಳ ಸಾಗರವೇ ಬರುತ್ತಿದೆ. ನೆನ್ನೆ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಮಂದಿಯು ಬಿಸಿಲು ಹಾಗೂ ಮಳೆ ಎಂದು ಏನೂ ಲೆಕ್ಕಿಸದೆ ಅವನನ್ನು ನೋಡಲು ಬಂದ್ದಿದ್ದಾರೆ.
ನಿಮ್ಮ ಅಭಿಮಾನಕ್ಕೆ pic.twitter.com/Z4WCoshM4s— Raghavendra Rajkumar (@RRK_Official_) November 6, 2021
ಪುನೀತ್ ಕಳೆದುಕೊಂಡ ಪತ್ನಿ ಅಶ್ವಿನಿ, ಮಕ್ಕಳು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬಸ್ಥರು ದು;ಖದಲ್ಲಿದ್ದು, ಸೋಮವಾರ 11 ದಿನದ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮಂಗಳವಾರ ಅರಮನೆ ಮೈದಾನದಲ್ಲಿ ಚಿತ್ರೋದ್ಯಮದ ಗಣ್ಯರು, ಅಪ್ಪು ಒಡನಾಡಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.
ನವೆಂಬರ್ 16 ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದಿಂದ ಅಪ್ಪುಗೆ ನಮನ ಕಾರ್ಯಕ್ರಮವನ್ನು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.