ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ದ್ವಿಚಕ್ರವಾಹನ ಸವಾರರನ್ನು ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸುವ ಮೂಲಕ...
Published: 13th November 2021 06:55 PM | Last Updated: 13th November 2021 07:11 PM | A+A A-

ಗಾಯಾಳುಗಳನ್ನು ಉಪಚರಿಸುತ್ತಿರುವ ಸಚಿವರು
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ದ್ವಿಚಕ್ರವಾಹನ ಸವಾರರನ್ನು ತಮ್ಮ ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗೃಹ ಸಚಿವರು ಇಂದು ಅಧಿಕೃತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದಾಗ ಮಂಡಗದ್ದೆ ಬಳಿ ಅಪಘಾತವಾಗಿತ್ತು. ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದನ್ನು ಗಮನಿಸಿದ ಆರಗ ಜ್ಞಾನೇಂದ್ರ ಅವರು ತಮ್ಮ ಕಾರನ್ನು ನಿಲ್ಲಿಸಿ, ಸ್ವತಃ ತಾವೇ ಗಾಯಾಳುಗಳನ್ನು ಉಪಚರಿಸಿ, ಅವರನ್ನು ತಮ್ಮ ಬೆಂಗಾವಲು ವಾಹನದಲ್ಲಿ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನು ಓದಿ: ಬಿಟ್ ಕಾಯಿನ್ ದಂಧೆ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ
ಯುವಕರ ಗುರುತು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಒಬ್ಬರು ಆರಗ ಗ್ರಾಮದವರು ಎಂದು ಹೇಳುತ್ತಿದ್ದರು. "ರಸ್ತೆಯಲ್ಲಿ ಬಿದ್ದಿದ್ದ ಯುವಕರು ಸತ್ತಿದ್ದಾರೆಂದು ಭಾವಿಸಿ ಜನ ಅವರ ಬಳಿ ಹೋಗಲು ಹೆದರುತ್ತಿದ್ದರು, ನಾನು ಅವರನ್ನು ಗಮನಿಸಿ ಹತ್ತಿರ ಹೋಗಿ ನೀರು ಚಿಮುಕಿಸಿದೆ. ನಂತರ ನಾವು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಯುವಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಮನೆಗೆ ಕಳುಹಿಸಲಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಅವರು ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ಬರುವ ದಾರಿಯಲ್ಲಿ ಮಂಡಗದ್ದೆ ಬಳಿ ಇಂದು ಬೈಕ್ ಅಪಘಾತಕ್ಕೀಡಾಗಿ, ಇಬ್ಬರು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು. ಕೂಡಲೇ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಎಸ್ಕಾರ್ಟ್ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. (1/2) pic.twitter.com/or5BpvzXzM
— Araga Jnanendra (@JnanendraAraga) November 13, 2021