ಹೊಸ ವಾಹನಗಳ ನೋಂದಣಿ ತಿದ್ದುಪಡಿ ಅಧಿನಿಯಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

 ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಜವಾಬ್ದಾರಿಯನ್ನು ಡೀಲರ್ ಗಳಿಗೆ ವಹಿಸಿ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಜವಾಬ್ದಾರಿಯನ್ನು ಡೀಲರ್ ಗಳಿಗೆ ವಹಿಸಿ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ತಿದ್ದುಪಡಿ ನಿಯಮದ ಅನುಸಾರ ಆಗಿರುವ ವಾಹನ ನೋಂದಣಿಗಳು ಅರ್ಜಿ ಕುರಿತು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ನೀಡಿದೆ. 

ಹೊಸ ವಾಹನಗಳ  ಡೀಲರ್ ಮಟ್ಟದ ನೋಂದಣಿ ಗೆ ಅವಕಾಶ ಕಲ್ಪಿಸಿ 2021ರ ಅಕ್ಟೋಬರ್ 31ರಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಕೋರಿ ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಮೊಹಮ್ಮದ್ ದಸ್ತಗೀರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ಅವರು ಹೊಸ ವಾಹನಗಳ ನೋಂದಣಿ ಮಾಡುವ ಜವಾಬ್ದಾರಿಯನ್ನು ವಾಹನ ಮಾರಾಟಗಾರರಿಗೇ ವಹಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದು ಮೊಟಾರು ವಾಹನ ಕಾಯಿದೆಗೆ ವಿರುದ್ಧವಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಸಾರಿಗೆ ಇಲಾಖೆಯ ಈ ಕ್ರಮ ಟ್ರಾವೆಲ್ ಏಜೆನ್ಸಿಗಳಿಗೆ ಪಾಸ್ಪೋರ್ಟ್ ಹಾಗೂ ವೀಸಾ ವಿತರಿಸುವ ಹಕ್ಕು ನೀಡಿದಷ್ಟೇ ಅಪಾಯಕಾರಿಯಾಗಿದೆ. ಯಾರು ಯಾರಿಗೆ ಬೇಕಾದರೂ ವಾಹನ ನೋಂದಣಿ ಮಾಡಿಕೊಡುವ ಸಾಧ್ಯತೆ ಇದೆ. ಆದ್ದರಿಂದ, ಅಕ್ಟೋಬರ್ 31ರ ಅಧಿಸೂಚನೆ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ವಕೀಲರು  ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕಾಗಿ ಕೊಂಚ ಕಾಲಾವಕಾಶ ನೀಡಬೇಕು  ಎಂದು ಕೋರಿದರು. ಅದನ್ನು ಪರಿಗಣಿಸಿದ ಪೀಠವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು.

ಅರ್ಜಿದಾರರ ಪರ ವಕೀಲರು  ಸರ್ಕಾರ ಆಕ್ಷೇಪಣೆ ಸಲ್ಲಿಸಲಿ. ಆದರೆ, ಅಷ್ಟರೊಳಗೆ ಸಾಕಷ್ಟು ವಾಹನಗಳನ್ನು ಖಾಸಗಿ ಡೀಲರ್ಗಳು ನೋಂದಣಿ ಮಾಡಿಕೊಡುವ ಸಾಧ್ಯತೆ ಇದೆ. ಆ ವಾಹನಗಳನ್ನು ಹೊರ ರಾಜ್ಯಗಳಿಗೆ ಕೊಂಡೊಯ್ಯುವ ಸಾಧ್ಯತೆಯೂ ಇದೆ. ಆದ್ದರಿಂದ, ವಾಹನಗಳ ನೋಂದಣಿ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡುವುದಾಗಿ ಸ್ಪಷ್ಟಪಡಿಸಿ ಮಧ್ಯಂತರ ಆದೇಶ ನೀಡಬೇಕು ಎಂದರು. ಅದನ್ನು ಪರಿಗಣಿಸಿದ ಪೀಠವು ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಅಧಿಸೂಚನೆಯ ಪ್ರಕಾರ ವಾಹನಗಳ ನೋಂದಣಿಯಾಗಿದ್ದರೆ, ಅವು ಈ ಅರ್ಜಿ ಕುರಿತ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಹೊರಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com