ಎಣ್ಣೆ, ಬೇಳೆ, ತರಕಾರಿ ಬೆಲೆ ಗಗನಕ್ಕೆ: ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಿಬ್ಬಂದಿಗೆ 'ವರಿ'!
ಕೋವಿಡ್ ಸಾಂಕ್ರಾಮಿಕದಿಂದಾಗಿ 18 ತಿಂಗಳ ನಂತರ ಶಾಲೆಗಳು ಮತ್ತೆ ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ನೂರಕ್ಕೆ ನೂರರಷ್ಟು ಹಾಜರಾಗುತ್ತಿದ್ದಾರೆ.
Published: 17th November 2021 02:12 PM | Last Updated: 17th November 2021 02:29 PM | A+A A-

ಸಾಂದರ್ಭಿಕ ಚಿತ್ರ
ಕೊಪ್ಪಳ: ಕೋವಿಡ್ ಸಾಂಕ್ರಾಮಿಕದಿಂದಾಗಿ 18 ತಿಂಗಳ ನಂತರ ಶಾಲೆಗಳು ಮತ್ತೆ ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ನೂರಕ್ಕೆ ನೂರರಷ್ಟು ಹಾಜರಾಗುತ್ತಿದ್ದಾರೆ.
ಆದರೆ ಹಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಮಸ್ಯೆ ಎದುರಾಗಿದೆ, ನವೆಂಬರ್ 2 ರಿಂದ ಬಿಸಿಯೂಟ ನೀಡಲು ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಅಕ್ಕಿ ಮತ್ತು ಗೋದಿಯನ್ನು ಸರಬರಾಜು ಮಾಡಿದೆ. ಆದರೆ ಆಯಾ ಶಾಲಾ ಮುಖ್ಯಸ್ಥರು, ಎಣ್ಣೆ, ತರಕಾರಿ ಮತ್ತು ಬೇಳೆ ಖರೀದಿಸಬೇಕಾಗಿದೆ.
ಜೂನ್ 23, 2020 ರ ಸರ್ಕಾರದ ನಿರ್ದೇಶನದ ಪ್ರಕಾರ, 1 ರಿಂದ 5 ನೇ ತರಗತಿಯ ಪ್ರತಿ ವಿದ್ಯಾರ್ಥಿಯು ಮಧ್ಯಾಹ್ನದ ಊಟದಲ್ಲಿ 20 ಗ್ರಾಂ ಸೊಪ್ಪು ಮತ್ತು 50 ಗ್ರಾಂ ತರಕಾರಿ ಇರಬೇಕು, 5 ರಿಂದ 10 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 30 ಗ್ರಾಂ ಬೇಳೆ 75 ಗ್ರಾಂ ತರಕಾರಿ ನೀಡಬೇಕು.
ಸರ್ಕಾರವು 1 ರಿಂದ 5 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 4.97 ರು. ಮತ್ತು 5 ರಿಂದ 10 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ಕೇವಲ 7.45 ರೂ ನಿಗದಿಪಡಿಸಿದೆ. ಮತ್ತೊಂದೆಡೆ, ಖಾದ್ಯ ತೈಲದ ಬೆಲೆಗಳು ಲೀಟರ್‌ಗೆ 150 ರೂ. ಆಸುಪಾಸಿನಲ್ಲಿದೆ. ತೊಗರಿಬೇಳೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 100 ರೂ.ಗೆ ಮಾರಾಟವಾಗುತ್ತಿದೆ.
ಇನ್ನೂ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೀಗಿರುವಾಗ, ಶಾಲಾ ಮುಖ್ಯಸ್ಥರು ಹಾಗೂ ಮಧ್ಯಾಹ್ನದ ಊಟದ ಯೋಜನೆ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿಸಿದಂತಿದೆ ಎಂದು ಕೊಪ್ಪಳ ಜಿಲ್ಲಾ ಯೋಜನಾ ನೌಕರರ ಸಂಘದ ಅಧ್ಯಕ್ಷೆ ಲಕ್ಷ್ಮೀ ಸೋನಾರ್ ಹೇಳಿದ್ದಾರೆ.
ಆದರೆ ಮೈಸೂರಿನಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಶಾಲೆಗಳಿಗೆ ಹೆಚ್ಚಿನ ಆಹಾರ ಧಾನ್ಯಗಳನ್ನು ಖರೀದಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದರಿಂದ ಸಮಸ್ಯೆ ಉದ್ಭವವಾಗಿಲ್ಲ.
ನಾವು ಇತರ ಆಹಾರ ಧಾನ್ಯಗಳಿಗೆ ಮೀಸಲಾದ ನಿಧಿಯಿಂದ ಖರೀದಿಸಲು ಶಾಲಾ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಮತ್ತು ಅಕ್ಕಿ ಬೆಲೆ ಹೆಚ್ಚು ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿ ಶೇ 86-89ರಷ್ಟು ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗಿದೆ ಎಂದು ಬಿಸಿಯೂಟಕಾರ್ಯನಿರ್ವಾಹಕ ಅಧಿಕಾರಿ ಸಿ.ಲಿಂಗರಾಜಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ನಿಂದ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ: ಶಿಕ್ಷಣ ಇಲಾಖೆ ಪ್ರಾಯೋಗಿಕ ಅಧ್ಯಯನ
ಇಸ್ಕಾನ್‌ನ ಅಕ್ಷಯ ಪಾತ್ರ ಫೌಂಡೇಶನ್‌ನಿಂದ ಆಹಾರ ಒದಗಿಸುವ 146 ಶಾಲೆಗಳಲ್ಲಿಯೂ ಪರಿಸ್ಥಿತಿ ಚೆನ್ನಾಗಿದೆ. ಸರಕುಗಳ ಬೆಲೆ ಏರಿಕೆಯು ಮಧ್ಯಾಹ್ನದ ಊಟದ ಯೋಜನೆ ಮೇಲೆ ತಕ್ಷಣದ ಪರಿಣಾಮ ಬೀರಿಲ್ಲ, ಆದರೆ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮಡಿಕೇರಿಯ ಸೇಂಟ್ ಮೈಕಲ್ ಶಾಲೆಯ ಪ್ರಾಂಶುಪಾಲ ಜಾನ್ಸನ್ ಕೆ.ಎ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಯೂಟಕ್ಕಾಗಿ ಸರ್ಕಾರ ಈಗಾಗಲೇ ಸರಕುಗಳನ್ನು ಪೂರೈಸಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಆಹಾರದ ಗುಣಮಟ್ಟವನ್ನು ನಿರ್ವಹಿಸುವುದು ಸವಾಲಾಗಬಹುದು. ಬೆಲೆ ಏರಿಕೆಯ ಪರಿಣಾಮ ಕಡಿಮೆ ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ ಶಾಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಮಂಜೂರಾದ ಕನಿಷ್ಠ ಹಣದಲ್ಲಿ ಸರಕುಗಳನ್ನು ಖರೀದಿಸುವುದು ಅವರಿಗೆ ಕಠಿಣವಾಗಿರುತ್ತದೆ ಎಂದು ಅವರು ವಿವರಿಸಿದರು.
ಬೇಳೆಕಾಳು, ಎಣ್ಣೆ ಮತ್ತು ಉಪ್ಪನ್ನು ಒದಗಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ರಾಜ್ಯ ಸರ್ಕಾರವು ಶೀಘ್ರದಲ್ಲೇ ನಿರ್ದೇಶನ ನೀಡಲಿದೆ .
ಭಾರತೀಯ ಆಹಾರ ನಿಗಮವು ಜಿಲ್ಲೆಗಳ ಅವಶ್ಯಕತೆಗೆ ಅನುಗುಣವಾಗಿ ಅಕ್ಕಿಯನ್ನು ಪೂರೈಸುತ್ತದೆ. 100 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು ತರಕಾರಿ, ಮಸಾಲೆ ಮತ್ತು ಮೆಣಸಿನ ಪುಡಿಯನ್ನು ಖರೀದಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಾರ್ವಜನಿಕ ಸೂಚನಾ ವಿಭಾಗದ ಮೂಲಗಳು ತಿಳಿಸಿವೆ.