ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ನಿರಂತರ ಮಳೆ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದು ಇನ್ನೂ ಎರಡರಿಂದ ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಗುರುವಾರ ಹೇಳಿದ್ದಾರೆ.
Published: 18th November 2021 05:37 PM | Last Updated: 18th November 2021 05:41 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದು ಇನ್ನೂ ಎರಡರಿಂದ ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಗುರುವಾರ ಹೇಳಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತವೇ ನಿರಂತರ ಮಳೆಗೆ ಕಾರಣವಾಗಿದೆ. ಇದು ಚೆನ್ನೈ ಸಮೀಪ ಕೇಂದ್ರೀಕೃತಗೊಂಡಿದೆ. ಇದರಿಂದಾಗಿಯೇ ಚೆನ್ನೈ ಸೇರಿದಂತೆ ಅಲ್ಲಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅತಿಯಾದ ಮಳೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಇದನ್ನು ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ, ರಾಜಧಾನಿಯಲ್ಲಿ ಇನ್ನೂ ಎರಡು ದಿನ ವರುಣನ ಅಬ್ಬರ
ಪ್ರತಿವರ್ಷ ನವೆಂಬರ್ – ಡಿಸೆಂಬರ್ ತಿಂಗಳುಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಮಾನ್ಯ. ಸಮುದ್ರದ ಮೇಲ್ಮೆಯಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಭೂಮಿ ಸಮೀಪಿಸಿದಂತೆ ಇದರ ಪರಿಣಾಮ ತಗ್ಗುತ್ತದೆ. ಆದರೆ ಸಮುದ್ರತೀರದ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಿರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಇನ್ನೂ ಕೆಲವಾರು ಜಿಲ್ಲೆಗಳಲ್ಲಿಯೂ ಮಳೆಯ ಪರಿಣಾಮವಿರುತ್ತದೆ. ವಾಯುಭಾರ ಕುಸಿತ ಪರಿಣಾಮ ಪರಿಧಿ 500 ಕಿಲೋ ಮೀಟರ್ ತನಕ ಪಸರಿಸಿರುತ್ತದೆ ಎಂದಿದ್ದಾರೆ.
ನವೆಂಬರ್ – ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಬಂಗಾಳ ಕೊಲ್ಲಿಯಲ್ಲಿ ವಾರಕ್ಕೊಮ್ಮೆ, ಕೆಲವೊಮ್ಮೆ ಎರಡು ವಾರಕ್ಕೊಮ್ಮೆಯೂ ವಾಯುಭಾರ ಕುಸಿತ ಆಗುತ್ತದೆ. ಕೆಲವೊಮ್ಮೆ ಇದು ವೇಗವಾಗಿ ಚಲನೆಯಾಗುತ್ತದೆ. ಸದ್ಯಕ್ಕೆ ಇದು ನಿಧಾನವಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ನಾಳೆ ಮಧ್ಯಾಹ್ನದವರೆಗೂ ಮಳೆಯ ಬಿರುಸು ಹೆಚ್ಚಿರುತ್ತದೆ. ಇನ್ನೂ ಮೂರು ದಿನಗಳವರೆಗೆ ಮಳೆ ಇರುತ್ತದೆ ಎಂದು ಅವರು ವಿವರಿಸಿದರು.