ಕೊರೋನೋತ್ತರ ಸ್ಥಿತ್ಯಂತರ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ; ಇದೇ ಮೊದಲ ಬಾರಿಗೆ ಖಾಸಗಿ ಶಾಲೆಗಳಲ್ಲಿ ಕುಸಿತ!

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣ ಒಂದು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 
ಶಾಲೆಗೆ ತೆರಳುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)
ಶಾಲೆಗೆ ತೆರಳುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣ ಒಂದು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2018 ರಲ್ಲಿ ಶೇ.69.4 ಹಾಗೂ 2020 ರಲ್ಲಿ ಶೇ.68.6 ರಷ್ಟಿದ್ದ ದಾಖಲಾತಿ ಪ್ರಮಾಣ ಈಗ ಶೇ.77.7 ಕ್ಕೆ ಏರಿಕೆಯಾಗಿದೆ. 

ಕೋವಿಡ್-19 ನಂತರದ ಶಿಕ್ಷಣದ ವಾರ್ಷಿಕ ಸ್ಥಿತಿ ವರದಿ (ASER) ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ನ.17 ರಂದು ವರದಿ ಬಿಡುಗಡೆಯಾಗಿದೆ. 

30 ಜಿಲ್ಲೆಗಳ 890 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆದಿದ್ದು, 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ.77.7 ( ಶೇ.76.8 ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.78.6 ರಷ್ಟು ವಿದ್ಯಾರ್ಥಿನಿಯರು) ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ನಡುವೆ ಖಾಸಗಿ ಬೋಧನೆ (private tuition) ಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ. 

ದೇಶಾದ್ಯಂತ 17,814 ಗ್ರಾಮಗಳಲ್ಲಿ 76,606 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 4,841 ಮನೆಗಳು ಕರ್ನಾಟಕ ರಾಜ್ಯದ್ದಾಗಿವೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಶಾಲೆಗಳಲ್ಲಿನ ದಾಖಲಾತಿ 2020 ರ ಶೇ.28.8 ರಿಂದ 2021 ರಲ್ಲಿ ಶೇ.24.4 ಕ್ಕೆ ಕುಸಿತ ಕಂಡಿದೆ.
 
ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಹೆಚ್ಚುವುದಕ್ಕೆ ಹಲವಾರು ಕಾರಣಗಳಿರಬಹುದು. ಕೋವಿಡ್-19 ಸಂದರ್ಭದಲ್ಲಿ ಕುಟುಂಬಗಳು ತೀವ್ರ ಆರ್ಥಿಕ ನಷ್ಟ ಎದುರಿಸಿವೆ. ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುತ್ತಿದ್ದ ಹಲವು ಶಾಲೆಗಳು ಈ ಅವಧಿಯಲ್ಲಿ ಮುಚ್ಚಿವೆ. ಖಾಸಗಿ ಶಾಲೆಗಳು ಮುಚ್ಚಿದ ಬಳಿಕ ಅಲ್ಲಿನ ಶಿಕ್ಷಕರೂ ತಮ್ಮ ವೃತ್ತಿಯನ್ನು ಬದಲಾಯಿಸಿದ್ದಾರೆ. ಸರ್ಕಾರವೂ ಸಹ ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ. ನಗರ ಪ್ರದೇಶಗಳಲ್ಲಿ ಇದ್ದ ಹಲವು ವಲಸಿಗ ಕುಟುಂಬಗಳು ವಾಪಾಸ್ ತಮ್ಮ ಊರುಗಳಿಗೆ ತೆರಳಿವೆ ಇವೆಲ್ಲದರ ಕಾರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿರಬಹುದು ಎಂದು ಟೀಚರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಬಿ.ಆರ್ ಗೋಪಾಲ್ ವಿಶ್ಲೇಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com