ಹ್ಯಾಕರ್ ಶ್ರೀಕಿ ಬಳಿಯಿಂದ 12 ಸಾವಿರದ 900 ಬಿಟ್ ಕಾಯಿನ್ ಗಳನ್ನು ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು ಪಡೆದುಕೊಂಡಿದ್ದಾರೆ: ಆರ್ ಟಿಐ ಕಾರ್ಯಕರ್ತ ಆರೋಪ

ರಾಜ್ಯದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಬಗ್ಗೆ ಹೊಸ ಹೊಸ ವಿಷಯಗಳು ಹೊರಬರುತ್ತಿವೆ.
ಹ್ಯಾಕರ್ ಶ್ರೀಕಿ
ಹ್ಯಾಕರ್ ಶ್ರೀಕಿ

ಬೆಂಗಳೂರು: ರಾಜ್ಯದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಪಟ್ಟಂತೆ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಬಗ್ಗೆ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ನಿನ್ನೆ ಆರ್ ಟಿಐ ಕಾರ್ಯಕರ್ತ ಎ ಆರ್ ಅಶೋಕ್ ಕುಮಾರ್ ಅಡಿಗ, ಪೊಲೀಸ್ ಅಧಿಕಾರಿಗಳು ಮತ್ತು ಖ್ಯಾತ ರಾಜಕಾರಣಿಗಳು ಡ್ರಗ್ ಕೇಸಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ತಾವು ದೂರು ನೀಡಿದ್ದರೂ ಪೊಲೀಸ್ ಆಯುಕ್ತ ಕಮಲ್ ಮಂತ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು ಎಂದು ಆರೋಪಿಸಿದ್ದಾರೆ.

ಇದೀಗ ತಾವು ದೂರಿನ ಸಂಪೂರ್ಣ ವಿವರಗಳನ್ನು ಪ್ರಧಾನ ಮಂತ್ರಿ ಕಚೇರಿ, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದೇನೆ ಎಂದಿದ್ದಾರೆ.

ತಾವು ಕಳೆದ ಏಪ್ರಿಲ್ 22ರಂದು ನೀಡಿದ್ದ ದೂರಿನ ಪ್ರತಿಯನ್ನು ಹಂಚಿಕೊಂಡಿರುವ ಅಶೋಕ್ ಕುಮಾರ್ ಅಡಿಗ, ಅದರ ಜೊತೆ ತಾವು ನಡೆಸಿದ ವಾಟ್ಸಾಪ್ ಚಾಟ್ ನ ಇಮೇಜ್ ನ್ನು ಕೂಡ ತೋರಿಸಿದ್ದಾರೆ. ವಾಟ್ಸಾಪ್ ಚಾಟ್ ನ್ನು ಪೊಲೀಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತರಿಗೆ, ಕೇಂದ್ರ ಅಪರಾಧ ತನಿಖಾ ವಿಭಾಗದ ಬಿ ಎಸ್ ಅಂಗಡಿಯವರಿಗೆ ಸಹ ಕಳುಹಿಸಿದ್ದೆ ಎಂದು ಹೇಳಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿಯೇ ಹಗರಣ ಬಗ್ಗೆ ತಾವು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದ್ದಾರೆ.

ಕಾರ್ಯಕರ್ತ ಅಶೋಕ್ ಆರೋಪ: ಹ್ಯಾಕರ್ ಶ್ರೀಕಿ 12 ಸಾವಿರದ 900 ಬಿಟ್ ಕಾಯಿನ್ ಗಳನ್ನು ಹ್ಯಾಕ್ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಡ್ರಗ್ ಕೇಸಿನಲ್ಲಿ ಶ್ರೀಕಿ ಬಂಧನವಾಗಿತ್ತು. ಕಳೆದ ಜನವರಿ ತಿಂಗಳಲ್ಲಿ ಕೆಲವು ಉನ್ನತ ಮಟ್ಟದ ಸಿಸಿಬಿ ಅಧಿಕಾರಿಗಳು ಶ್ರೀಕಿಯಿಂದ 9 ಸಾವಿರದ 600 ಬಿಟ್ ಕಾಯಿನ್ ತೆಗೆದುಕೊಂಡಿದ್ದರು ಎಂದು ನನಗೆ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಕಳೆದ ಜನವರಿ 3ರಂದು ವಾಟ್ಸಾಪ್ ನಲ್ಲಿ ನಾನು ಕೆಲವು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ, ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದರು.

ನಂತರ ಏಪ್ರಿಲ್‌ನಲ್ಲಿ, ಸಿಸಿಬಿ ಅಧಿಕಾರಿಗಳು ಮತ್ತೆ 3,300 ಬಿಟ್‌ಕಾಯಿನ್‌ಗಳನ್ನು ಹೆಚ್ಚು ತೆಗೆದುಕೊಂಡಿದ್ದರು. ನಾನು ಏಪ್ರಿಲ್ 20 ರಂದು ಕಮಲ್ ಪಂತ್ ಅವರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದೆ. ಈ ಹಗರಣವನ್ನು ವಿವರಿಸಲು ನಾನು ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದ್ದಕ್ಕೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಶ್ರೀಕಿ ಬಿಟ್‌ಕಾಯಿನ್‌ನ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದು ಮತ್ತು ಸಾವಿರಾರು ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ವರ್ಗಾಯಿಸಿರುವುದು ಕಂಡುಬಂದಿದೆ ಎಂದು ಅಶೋಕ್ ಕುಮಾರ್ ಆರೋಪವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com