ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ, ಪ್ರತೀ ವರ್ಷ 4,000 ಪೊಲೀಸರ ನೇಮಕಕ್ಕೆ ನಿರ್ಧಾರ: ಸಚಿವ ಆರಗ ಜ್ಞಾನೇಂದ್ರ
ರಾಜ್ಯ ಸರ್ಕಾರ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ಒದಗಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Published: 21st November 2021 01:58 PM | Last Updated: 21st November 2021 01:58 PM | A+A A-

ಗೃಹ ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ: ರಾಜ್ಯ ಸರ್ಕಾರ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ಒದಗಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದಕ್ಕಾಗಿ 200 ಕೋಟಿ ರೂಪಾಯಿ ವೆಚ್ಚದಲ್ಲಿ 113 ಪೊಲೀಸ್ ಟಕ್ ಗಳನ್ನು ನಿರ್ಮಿಸಲಾಗುತ್ತಿದೆ ಹಾಗೂ ಹಾಲಿ ಇರುವ ಕಟ್ಟಡಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ಹಾಕಿಕೊಂಡಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ದೇಶದಲ್ಲಿಯೇ ಅತ್ಯುತ್ತಮ, ಹತ್ತು ಪೊಲೀಸ್ ಸ್ಟೇಷನ್ ಗಳಲ್ಲೊಂದು ಎಂದು , ಕೇಂದ್ರ ಗೃಹ ಸಚಿವ ಇಲಾಖೆಯಿಂದ ಘೋಷಣೆಯಾಗಿರುವುದು ಸಂತಸದ ಸಂಗತಿ ಎಂದರು.
ಪ್ರತೀ ವರ್ಷ 4,000 ಪೊಲೀಸರ ನೇಮಕಕ್ಕೆ ನಿರ್ಧಾರ
ಅಂತೆಯೇ ರಾಜ್ಯದಲ್ಲಿ 12 ಸಾವಿರ ಪೊಲೀಸ್ ಹುದ್ದೆಗಳು ಖಾಲಿ ಇದ್ದು, ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಿಸಲು ನಿರ್ಧರಿಸಲಾಗಿದೆ. ಮೂರು ವರ್ಷಗಳ ಹಿಂದೆ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಪ್ರತಿ ವರ್ಷ ಭರ್ತಿ ಮಾಡಿಕೊಳ್ಳುತ್ತಿದ್ದರಿಂದ ಈಗ ಖಾಲಿ ಹುದ್ದೆಗಳ ಸಂಖ್ಯೆ12 ಸಾವಿರಕ್ಕೆ ಇಳಿದಿದೆ. ರಾಜ್ಯದಲ್ಲಿ ಈಗ 970 ಎಸ್‌ಐಗಳ ಹುದ್ದೆ ಭರ್ತಿಯಾಗುತ್ತಿದ್ದು, ಕಾಲಮಿತಿಯೊಳಗೆ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು. ಹೊಸದಾಗಿ 100 ಠಾಣೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ 200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹೊಸದಾಗಿ 10 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಅಗ್ನಿಶಾಮಕ ಠಾಣೆಗಳ ಮೇಲ್ದರ್ಜೆಗೆ
ಅಗ್ನಿಶಾಮಕ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಗ್ನಿ ಅವಘಡಗಳನ್ನು ನಿಯಂತ್ರಿಸಲು 100 ಮೀಟರ್‌ವರೆಗೆ ಎತ್ತರದವರೆಗೆ ಹೋಗಿ ಬೆಂಕಿ ನಂದಿಸುವ ವಾಹನಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಈ ಕುರಿತು ಫಿನ್ಲೆಂಡ್ ಸಂಸ್ಥೆಯೊಂದಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.
2018ರಲ್ಲಿ ಶ್ರೀಕಿ ಬಗ್ಗೆ ಕಾಂಗ್ರೆಸ್ ಗೆ ಗೊತ್ತಿತ್ತು, ಕ್ರಮ ಕೈಗೊಳ್ಳಲಿಲ್ಲವೇಕೆ?
2018ರಲ್ಲಿಯೇ ಹ್ಯಾಕರ್ ಶ್ರೀಕಿ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಾಂಗ್ರೆಸ್ಸಿಗರು ಯಾಕೆ ಸುಮ್ಮನೆ ಕುಳಿತರು. ನಾವು ಆತನ ವಿರುದ್ಧ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಹ ಸಲ್ಲಿಸಿದ್ದೇವೆ. ನಾವು ಬಂಧಿಸುವ ಮುನ್ನ ಆತ ಕಾಂಗ್ರೆಸ್ ಮುಖಂಡರ ಮಕ್ಕಳ ಜತೆ ಇದ್ದ ಎನ್ನುವುದು ಅರ್ಥ ಮಾಡಿಕೊಳ್ಳೇಕು. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಅನುಮಾನ ಬೇಡ. ಸೈಬರ್ ತಂತ್ರಜ್ಞರ ನೆರವು ಪಡೆದು ಪ್ರಕರಣದ ಆಳದವರೆಗೂ ಹೋಗಲಾಗುತ್ತಿದೆ. ಪ್ರಕರಣ ಹೊರಗೆ ಬಂದು 8 ತಿಂಗಳಾದರೂ ಕಾಂಗ್ರೆಸ್ಸಿಗರು ಯಾಕೆ ಮಾತನಾಡಿಲ್ಲ. ಅಧಿವೇಶನದಲ್ಲೂ ಮಾತಾಡಿಲ್ಲ. ಶ್ರೀಕಿ ಬಂಧಿಸಿದ್ದು ಕಾಂಗ್ರೆಸ್ಸಿಗೆ ನೋವಾಗಿದೆಯಾ ಎಂದು ಪ್ರಶ್ನಿಸಿದ ಅವರು, ಆತನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಾಖಲೆಗಳ ಸಮೇತ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.