ಸಿಎಂ ಬೊಮ್ಮಾಯಿ ಪಂಚಮಸಾಲಿ‌ ಸಮುದಾಯಕ್ಕೆ 2ಎ ಮೀಸಲಾತಿ ಕೊಡ್ತಾರೆ ಎಂಬ ಭರವಸೆ ಇದೆ: ಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ‌ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ಮೂರು ತಿಂಗಳುಗಳಲ್ಲಿ 2ಎ ಮೀಸಲಾತಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಪಂಚಮಸಾಲಿ‌ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ಮೂರು ತಿಂಗಳುಗಳಲ್ಲಿ 2ಎ ಮೀಸಲಾತಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ.

ಭಾನುವಾರ ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಕರೆಸಿ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಸಿ. ಸಿ. ಪಾಟೀಲ, ಮಾಜಿ ಸಚಿವ ವಿನಯ ಕಲಕರ್ಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಇದ್ದರು. ಹಾಗಾಗಿ ಮುಖ್ಯಮಂತ್ರಿಗಳ ಮನವಿ ಮೇರೆಗೆ ಮತ್ತೆ ಮೂರು ತಿಂಗಳುಗಳ ಕಾಲ ಕಾಲಾವಕಾಶ ನೀಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಹಿಂದುಳಿದ ಆಯೋಗದ ವರದಿ ಬಂದ ತಕ್ಷಣ ಮೂರು ತಿಂಗಳ ಒಳಗಾಗಿ ಮಾಡಿ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ‌ಹೇಳಿದ್ದಾರೆ. ಆ ಆಯೋಗ ಬೆಳಗಾವಿ ಜಿಲ್ಲೆಯಲ್ಲಿ ಡಿಸೆಂಬರ್ 9, 10,11 ರಂದು ಸಭೆ ಮಾಡಲು ತೀರ್ಮಾನಿಸಿತ್ತು. ಆದರೆ ವಿಧಾನ ಪರಿಷತ್ ‌ಚುನಾವಣೆಯ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲ್ಪಟ್ಟಿದೆ. ಇದು ಎರಡೂ ಬಾರಿ ಆಗಿದೆ. ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಕಾರಣ ನೀಡಿ ಮುಂದೂಡಿದರು. ಮತ್ತೆ ವಿಧಾನ ಪರಿಷತ್ ಚುನಾವಣೆ ನೆಪ ನೀಡಿ ಮುಂದೂಡಿದ್ದಾರೆ.

ಚುನಾವಣಾ ಆಯೋಗಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಆದ್ದರಿಂದ ಸರ್ಕಾರ ಮಾತು ನೀಡಿದ ಹಾಗೆ ಮೂರು ತಿಂಗಳಲ್ಲಿ ಆಯೋಗದ ವರದಿ ತರಿಸಿಕೊಂಡು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com