ಭದ್ರಾವತಿ ಜಲಾಶಯದಿಂದ ನೀರು ಬಿಡುಗಡೆ: ಆತಂಕದಲ್ಲಿ ಮುಂಡರಗಿ ರೈತರು
ಭದ್ರಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದೇ ಆದರೆ, ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಮುಂಡರಗಿಯಲ್ಲಿನ ರೈತರು ಆತಂಕಕ್ಕೊಳಗಾಗಿದ್ದಾರೆ.
Published: 22nd November 2021 12:17 PM | Last Updated: 22nd November 2021 01:57 PM | A+A A-

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತುಂಗಭದ್ರಾ ನದಿ ನೀರಿನಲ್ಲಿ ಮುಳುಗಡೆಯಾಗಿರುವ ಪಾಂಡುರಂಗ ಮಂಟಪ.
ಗದಗ: ಭದ್ರಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದೇ ಆದರೆ, ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಮುಂಡರಗಿಯಲ್ಲಿನ ರೈತರು ಆತಂಕಕ್ಕೊಳಗಾಗಿದ್ದಾರೆ.
ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ಹಮ್ಮಿಗಿ ಬ್ಯಾರೇಜ್'ನ ಗೇಟ್ ಗಳನ್ನು ತೆರೆಯಲೇಬೇಕಿದ್ದು, ಇದರಿಂದ ಭಾರೀ ಪ್ರಮಾಣದ ನೀರು ಕೃಷಿ ಭೂಮಿಗೆ ನುಗ್ಗುವ ಸಾಧ್ಯತೆಗಳಿವೆ ಹೀಗಾಗಿ ರೈತರು ಆತಂಕಕ್ಕೊಳಗಾಗುವಂತಾಗಿದೆ.
ಭಾನುವಾರ ಬೆಳಗ್ಗೆ 43.366 ಕ್ಯೂಸೆಕ್ ನೀರು ಹೊರ ಹರಿದಿದ್ದರಿಂದ ಹಮ್ಮಿಗಿ ಬ್ಯಾರೇಜ್'ನ ಏಳು ಗೇಟ್ ಗಳನ್ನು ತೆರೆಯಲಾಗಿತ್ತು. ಈಗಾಗಲೇ ಭಾರೀ ಮಳೆಯಿಂದಾಗಿ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ಇದೀಗ ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುವಂತಾಗುತ್ತದೆ.
ನದಿಯ ಸುತ್ತಮುತ್ತಲೂ ಬಿದರಳ್ಳಿ, ವಿಠಲಾಪುರ, ಸಿಂಗಟಾಲೂರು, ಗುಮ್ಮಗೋಳ, ಶಿರನಹಳ್ಳಿ, ಈರಣ್ಣನಗುಡ್ಡ, ಗಂಗಾಪುರ, ಕಾಕ್ಕೂರು, ಕೊರ್ಲಹಳ್ಳಿ ಮತ್ತಿತರ ಗ್ರಾಮಗಳಿವೆ.
ಭದ್ರತಾವದಿ ನದಿ ಈಗಾಗಲೇ ತುಂಬಿ ಹರಿಯುತ್ತಿದ್ದು, ಕಳೆದೆರಡು ದಿನಗಳಿಂದ ಮುಂಡರಗಿ ತಾಲೂಕಿನ ನೂರಾರು ಎಕರೆ ಪ್ರದೇಶಗಳಿಗೆ ನುಗ್ಗಿದೆ.
ಅಣೆಕಟ್ಟು ಕೇವಲ 1.8 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸ್ಥಳೀಯಾಡಳಿತದಿಂದಾಗಿ ಇನ್ನೂ ನಾಲ್ಕು ಗ್ರಾಮಗಳ ಸ್ಥಳಾಂತರ ಪ್ರಕ್ರಿಯೆಗಳು ಆರಂಭವಾಗಿಲ್ಲ. ಈ ನಡುವೆ ಮುಂಡರಗಿ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರಿಗೆ ನಿಯಮಾನುಸಾರ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಭಾರೀ ಪ್ರಮಾಣ ನೀರು ಬರುವ ಹಿನ್ನೆಲೆಯಲ್ಲಿ ಬಿದರಳ್ಳಿ, ವಿಟ್ಲಾಪುರ, ಗುಮ್ಮಗೋಳ ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ಈ ಗ್ರಾಮಗಳ ರೈತರು ಒತ್ತಾಯಿಸುತ್ತಿದ್ದಾರೆ.
ಈ ಗ್ರಾಮಗಳನ್ನು ಸ್ಥಳಾಂತರಿಸಿದ್ದೇ ಆದರೆ, ಬ್ಯಾರೇಜ್‌ನಲ್ಲಿ 3.8 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು ಮತ್ತು ಪ್ರವಾಹದಂತಹ ಪರಿಸ್ಥಿತಿಯನ್ನು ತಡೆಯಬಹುದು. ಜನ, ಜಾನುವಾರು, ಬೆಳೆಗಳ ಜೀವ ಉಳಿಸಬಹುದು ಎಂದು ಹೇಳಿದ್ದಾರೆ.
ಮುಂಡರಗಿಯ ನೀರಾವರಿ ಇಲಾಖೆ ಅಧಿಕಾರಿಗಳು ಮಾತನಾಡಿ, ‘ನದಿಯ ಒಳಹರಿವು ಹೆಚ್ಚುತ್ತಿದ್ದು, ಏಳು ಗೇಟ್‌ಗಳನ್ನು ತೆರೆಯಲಾಗಿದೆ. ಹೆಚ್ಚುವರಿ ನೀರು ಇದ್ದರೆ ಹೆಚ್ಚಿನ ಗೇಟ್‌ಗಳನ್ನು ತೆರೆಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.