ಭಾರಿ ಮಳೆ: ರಸ್ತೆ ದುರಸ್ತಿಗೆ 500 ಕೋಟಿ ರೂ., ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ. ಪರಿಹಾರ- ಸಿಎಂ ಬೊಮ್ಮಾಯಿ

ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದು, ರಸ್ತೆ ದುರಸ್ತಿಗೆ 500 ಕೋಟಿ ರೂ ಹಾಗೂ ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಬೆಳೆ ಹಾನಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ
ಬೆಳೆ ಹಾನಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ(Karnataka rains)ಯಿಂದಾಗಿ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮಹತ್ವದ ಘೋಷಣೆ ಮಾಡಿದ್ದು, ರಸ್ತೆ ದುರಸ್ತಿಗೆ 500 ಕೋಟಿ ರೂ ಹಾಗೂ ಸಂಪೂರ್ಣ ಮನೆ ಹಾನಿಗೆ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಮಳೆ ಹಾನಿ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹಾನಿಯಾದ ರಸ್ತೆ ದುರಸ್ತಿಗೆ 500 ಕೋಟಿ ರೂ. ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ತಕ್ಷಣವೇ 1 ಲಕ್ಷ ರೂ. ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಭಾಗಶಃ ಮನೆ ಹಾನಿಗೆ ಹಣ ಬಿಡುಗಡೆಗೂ ಆದೇಶಿಸಿದ್ದೇನೆ ಎಂದು ತಿಳಿಸಿದರು. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. 

ಬೆಳೆ ಸಮೀಕ್ಷೆ ಪರಿಹಾರ ಆ್ಯಪ್​ನಲ್ಲಿ ದಾಖಲಾಗಬೇಕು
ಇದೇ ವೇಳೆ ಬೆಳೆ ಸಮೀಕ್ಷೆ ಪರಿಹಾರ ಆ್ಯಪ್​ನಲ್ಲಿ ಎಂಟ್ರಿಯಾಗಬೇಕು. ಅದರಂತೆ ಬೆಳೆ ಹಾನಿ (Crop Loss)ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಬೊಮ್ಮಾಯಿ ಅವರು, ರಾಜ್ಯದಲ್ಲಿ ಡಿಸಿಗಳ ಖಾತೆಯಲ್ಲಿ 689 ಕೋಟಿ ರೂ. ಇದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದ್ದಾರೆ. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿರುವ ಸಿಎಂ, ಬೆಳೆ ನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು. 15ರಿಂದ 20 ದಿನ ಬೆಳೆ ಹಾನಿ ಸಮೀಕ್ಷೆ ನಡೆಸಲು ತಿಳಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್​ನಲ್ಲಾದ ಬೆಳೆ ಹಾನಿಗೆ 1.5 ಲಕ್ಷ ರೈತರಿಗೆ 130 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ 79,000 ರೈತರಿಗೆ 52 ಕೋಟಿ ರೂ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ಮಾಹಿತಿ ನೀಡಿದರು. 

ಮಳೆಯಿಂದ ಆಗಿರುವ ಹಾನಿಯ ಅವಲೋಕನ ಮತ್ತು ಪರಿಹಾರ ಕ್ರಮಗಳ ಮೇಲುಸ್ತುವಾರಿ ಮಾಡಲು ಸಂಬಂಧಿಸಿದ ಇಲಾಖೆಗಳ ಸಚಿವರು ಮತ್ತು ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಪ್ರವಾಸ ಮಾಡಲು ಚುನಾವಣಾ ಆಯೋಗವು ಅನುಮತಿ ನೀಡಿದೆ. ಡಿಸೆಂಬರ್ 10 ರಂದು ವಿಧಾನಪರಿಷತ್ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಳೆಯಿಂದ ಹಾನಿಗೀಡಾದ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯಗಳನ್ನು ವೀಕ್ಷಿಸಲು ಸಚಿವರಿಗೆ ಚುನಾವಣಾ ಆಯೋಗದಿಂದ ಅನುಮತಿ ಕೋರಿರುವುದಾಗಿ ಮುಖ್ಯಮಂತ್ರಿ ಭಾನುವಾರ ತಿಳಿಸಿದ್ದರು.

ಪರಿಹಾರ ಕ್ರಮಗಳ ಪರಿಶೀಲನೆ
ಸಿಎಂ ಬೊಮ್ಮಾಯಿ ಅವರು ನಿನ್ನೆ ರಾತ್ರಿ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆಯಿಂದ ಉಂಟಾದ ಹಾನಿ ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು. ಈ ತಿಂಗಳ ಆರಂಭದಿಂದ ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹದಿಂದಾಗಿ ಭಾನುವಾರ ಸಂಜೆಯವರೆಗೆ ಒಟ್ಟು 24 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 1 ರಿಂದ ಪ್ರಾಧಿಕಾರವು ಅಂದಾಜು ಮಾಡಿದ ಪ್ರಾಥಮಿಕ ನಷ್ಟ ಮತ್ತು ಹಾನಿಗಳ ಪ್ರಕಾರ, 658 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 8,495 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಅಂದಾಜು 191 ಪ್ರಾಣಿಗಳು ಪ್ರಾಣ ಕಳೆದುಕೊಂಡಿದ್ದರೆ, 4 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ, ಅವುಗಳಲ್ಲಿ 3,79,501 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 30,114 ಹೆಕ್ಟೇರ್ ತೋಟಗಾರಿಕೆ ಬೆಳೆಗಳಾಗಿವೆ. ಅಧಿಕಾರಿಗಳು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ 2,203 ಕಿಮೀ ರಸ್ತೆಗಳು ಹಾಳಾಗಿವೆ. ಭಾನುವಾರ ಸಂಜೆಯವರೆಗೆ 1,225 ಶಾಲೆಗಳು, 39 ಪಿಎಚ್‌ಸಿಗಳು, 1,674 ವಿದ್ಯುತ್ ಕಂಬಗಳು ಮತ್ತು 278 ವಿದ್ಯುತ್ ಪರಿವರ್ತಕಗಳು ಇತರ ಮೂಲಸೌಕರ್ಯ ಹಾನಿಯಾಗಿದೆ ಎನ್ನಲಾಗಿದೆ.

ಮಳೆ ಹಾನಿ ವೀಕ್ಷಣೆ ಮಾಡಿದ ಸಿಎಂ
ಕೋಲಾರ ಜಿಲ್ಲೆಯಲ್ಲಿಂದು ಮಳೆ ಹಾನಿ ಬಗ್ಗೆ ಸಿಎಂ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೋಲಾರ ಜಿಲ್ಲೆಗೆ ಸಿಎಂ ಭೇಟಿ ನೀಡಲಿದ್ದು, ಬೊಮ್ಮಾಯಿಗೆ ಉಸ್ತುವಾರಿ ಸಚಿವ, ಸಂಸದ ಸಾಥ್ ನೀಡಲಿದ್ದಾರೆ. ಕೋಲಾರ ತಾಲೂಕಿನ‌ ನರಸಾಪುರ, ಚೌಡದೇನಹಳ್ಳಿ, ಮುದುವಾಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 6,965 ಹೆಕ್ಟೇರ್‌ನಲ್ಲಿದ್ದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಭಾರಿ ಮಳೆಗೆ ಮೂವರ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

ಜೆಡಿಎಸ್ ಜೊತೆ ಮೈತ್ರಿ ಇಲ್ಲ
ಮೇಲ್ಮನೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ವಿಚಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ತಳ್ಳಿ ಹಾಕಿದ್ದಾರೆ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕೆಂಬ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆದಿಲ್ಲ. ಆದ್ರೆ, ಯಡಿಯೂರಪ್ಪ ಅವರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಕುರಿತು ಬಿಎಸ್ ವೈ ಅವರ ಜೊತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com