ಓಮಿಕ್ರಾನ್ ವೈರಾಣುವಿನ ರೋಗಲಕ್ಷಣಗಳೇನು, ತೀವ್ರತೆ ಎಷ್ಟು?: ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದು ಹೀಗೆ...

ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆ ಕೊರೋನಾ ಹೊಸ ತಳಿಯ ಆತಂಕ ಹಿನ್ನೆಲೆಯಲ್ಲಿ ಸಭೆ ಕರೆದಿದ್ದೇನೆ. ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳವರೆಗೆ ಸಮಗ್ರವಾಗಿ 5-6 ಗಂಟೆ ಸುದೀರ್ಘ ಸಭೆ ನಡೆಸಿ ಸಮಾಲೋಚನೆ ಮಾಡಲಿದ್ದೇನೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆ ಕೊರೋನಾ ಹೊಸ ತಳಿಯ ಆತಂಕ ಹಿನ್ನೆಲೆಯಲ್ಲಿ ಸಭೆ ಕರೆದಿದ್ದೇನೆ. ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳವರೆಗೆ ಸಮಗ್ರವಾಗಿ 5-6 ಗಂಟೆ ಸುದೀರ್ಘ ಸಭೆ ನಡೆಸಿ ಸಮಾಲೋಚನೆ ಮಾಡಲಿದ್ದೇನೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಇದರ ಜೊತೆಗೆ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರನ್ನು ಕೂಡ ನಾಳೆಯ ಸಭೆಗೆ ಆಹ್ವಾನಿಸಿದ್ದೇನೆ, ಮುಖ್ಯಮಂತ್ರಿಗಳ ಜೊತೆ ಸಹ ನಿರಂತರ ಸಂಪರ್ಕದಲ್ಲಿದ್ದೇನೆ. ಹೊಸ ವೈರಾಣು ಓಮಿಕ್ರಾನ್ ನ ಬಗ್ಗೆ ಜಿನೋಮಿಕ್ಸ್ ಸೀಕ್ವೆನ್ಸ್ ವರದಿ ಡಿಸೆಂಬರ್ 1ನೇ ತಾರೀಕು ಹೊತ್ತಿಗೆ ಬರುತ್ತದೆ ಎಂದರು.

ಓಮಿಕ್ರಾನ್ ಕೊರೋನಾ ರೂಪಾಂತರಿ 12 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಪ್ರತಿನಿತ್ಯ ಅಂತರರಾಷ್ಟ್ರೀಯ ವಿಮಾನಗಳು ಬರುತ್ತವೆ. ಅಂತಹ ವಿಮಾನಗಳಲ್ಲಿ ಬರುವ ಪ್ರಯಾಣಿಕರನ್ನು ಬಹಳ ಎಚ್ಚರಿಕೆಯಿಂದ ಪರೀಕ್ಷೆಗಳನ್ನು ಮಾಡಿ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಫ್ರಿಕಾ ಮತ್ತು ಇತರ ಓಮಿಕ್ರಾನ್ ಕಂಡುಬಂದ ದೇಶಗಳಿಂದ ಬಂದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದರು.

ಓಮಿಕ್ರಾನ್ ವೈರಾಣು ಪ್ರಭಾವ ಹೇಗಿದೆ?: ವಿದೇಶಗಳಿಂದ ಬಂದ ನಾಗರಿಕರು ಪ್ರಾಥಮಿಕ ಮತ್ತು ಎರಡನೇ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚುವ ಕೆಲಸ ಎರಡು ದಿನಗಳಿಂದ ಆಗುತ್ತಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಹಪಾಠಿಗಳ ಜೊತೆ ಕೂಡ ಈ ಓಮಿಕ್ರಾನ್ ವೈರಾಣು ಬಗ್ಗೆ ಮಾತನಾಡಿದ್ದೇನೆ. ಅವರು ಕಳೆದ 15 ದಿನಗಳಿಂದ ಚಿಕಿತ್ಸೆ ನೀಡಿ ನೋಡಿದ ಅನುಭವವನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, ಈ ಕೊರೋನಾ ರೂಪಾಂತರಿ ಬಹಳ ವೇಗವಾಗಿ ಹಿಂದಿನ ಕೋವಿಡ್ ರೂಪಾಂತರಿಗಿಂತ ಹರಡುತ್ತದೆ. ಆದರೆ ಹಿಂದಿನ ಡೆಲ್ಟಾ ತಳಿಗೆ ಹೋಲಿಸಿದರೆ ಇದು ಅಷ್ಟೊಂದು ಗಂಭೀರ ಪರಿಣಾಮ ಬೀರುವುದಿಲ್ಲ, ರೋಗಲಕ್ಷಣ ಸೌಮ್ಯ ಸ್ವರೂಪದಲ್ಲಿರುತ್ತದೆ ಎಂಬ ಸಮಾಧಾನಕರ ಸಂಗತಿ ಹೇಳಿದ್ದಾರೆ ಎಂದರು.

ರೋಗದ ಲಕ್ಷಣಗಳೇನು?: ಓಮಿಕ್ರಾನ್ ವೈರಾಣು ಸೋಂಕು ತಗಲಿದರೆ ರೋಗಿಗೆ ವಾಂತಿ ಬರುವಂತೆ ಆಗುವುದು, ನಾಡಿ ಬಡಿತ ಹೆಚ್ಚಾಗುವುದು, ಸುಸ್ತು ಆಗುವುದು, ಗಂಟಲು ಕೆರೆತ ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಹಿಂದಿನ ಕೋವಿಡ್ ಲಕ್ಷಣಗಳಾದ ಬಾಯಿರುಚಿ ಕಳೆದುಕೊಳ್ಳುವುದು, ವಾಸನೆ ಇಲ್ಲದಿರುವುದು ಓಮಿಕ್ರಾನ್ ನಲ್ಲಿ ಇರುವುದಿಲ್ಲ. ಡೆಲ್ಟಾ ರೂಪಾಂತರಿ ಕೊರೋನಾಕ್ಕೆ ಹೋಲಿಕೆ ಮಾಡಿದರೆ ಉಲ್ಭಣವಾಗಿ ಐಸಿಯುಗೆ ದಾಖಲಾಗಬೇಕಾದ ತೀವ್ರತೆಯಿರುವುದಿಲ್ಲ ಎಂದು ವೈಯಕ್ತಿಕವಾಗಿ ನನ್ನ ಸಹಪಾಠಿಗಳು ಹೇಳಿದ್ದಾರೆ.

ಇದನ್ನು ನಾನು ಅಧಿಕೃತವೆಂದು ಹೇಳುತ್ತಿಲ್ಲ, ವಿಶ್ವ ಆರೋಗ್ಯ ಸಂಸ್ಥೆ, ಐಸಿಎಂಆರ್ ವರದಿ ಬರುವವರೆಗೆ ನಾವೆಲ್ಲರೂ ಎಚ್ಚರವಾಗಿರೋಣ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com