ಬೂಸ್ಟರ್ ಡೋಸ್ ಲಸಿಕೆ ನೀಡಿಕೆ ಬಗ್ಗೆ ಕೇಂದ್ರದಿಂದಲೇ ಅಂತಿಮ ತೀರ್ಮಾನ: ಸಚಿವ ಡಾ. ಕೆ. ಸುಧಾಕರ್
ಕೋವಿಡ್-19 ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಮೂರನೇ ಬೂಸ್ಟರ್ ಡೋಸ್ ಲಸಿಕೆ ನೀಡಿಕೆ ಬಗ್ಗೆ ಕೇಂದ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
Published: 30th November 2021 11:53 AM | Last Updated: 30th November 2021 02:07 PM | A+A A-

ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಬೆಂಗಳೂರು: ಕೋವಿಡ್-19 ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಮೂರನೇ ಬೂಸ್ಟರ್ ಡೋಸ್ ಲಸಿಕೆ ನೀಡಿಕೆ ಬಗ್ಗೆ ಕೇಂದ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ದೇಶಕ್ಕೆ ಸಂಬಂಧಪಟ್ಟಿದ್ದು, ಕೋವಿಡ್-19 ಮೂರನೇ ಡೋಸ್ ಲಸಿಕೆ ಬಗ್ಗೆ ಕೇಂದ್ರ ಮತ್ತು ಐಸಿಎಂಆರ್ ಈ ಬಗ್ಗೆ ನಿರ್ಧರಿಸಿದೆ ಎಂದರು.
ಒಮಿಕ್ರಾನ್ ತಳಿಯ ವೈರಾಣುವಿನ ತೀವ್ರತೆ ಮತ್ತು ಪರಿಣಾಮಗಳ ಕುರಿತು ಡಿಸೆಂಬರ್ 1ರ ವೇಳೆಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಟವಾಗುವ ನಿರೀಕ್ಷೆಯಿದೆ. ಆ ಬಳಿಕವೇ ಹೊಸ ಕ್ರಮ ಗಳ ಕುರಿತು ಯೋಜಿಸಲಾಗುವುದು ಎಂದರು.
18 ರಾಷ್ಟ್ರಗಳಲ್ಲಿ ಒಮಿಕ್ರಾನ್ ತಳಿಯ ಕೊರೋನಾ ವೈರಾಣು ಸೋಂಕು ಪತ್ತೆಯಾಗಿದೆ. ಈ ಕಾರಣದಿಂದ ಬೆಂಗಳೂರು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳ ಜೊತೆಗೆ ಅಂತರ ರಾಜ್ಯ ಗಡಿಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ಅಗತ್ಯವಿದೆ ಎಂದು ಅವರು ಹೇಳಿದರು.
ಕೋವಿಡ್-19 ನಿಯಂತ್ರಣ ಕ್ರಮಗಳು ಮತ್ತು ಲಸಿಕೆ ನೀಡಿಕೆ ಕುರಿತು ಚರ್ಚಿಸಲು ಇಂದು ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆ, ಸೋಂಕಿತರ ಚಿಕಿತ್ಸೆ ಮತ್ತು ಸೋಂಕಿಲ್ಲದವರ ಕ್ವಾರಂಟೈನ್ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಕೋವಿಡ್ ಪತ್ತೆಯಾಗಿರುವ ಇಬ್ಬರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ವಂಶವಾಹಿ ಅನುಕ್ರಮಣಿಕೆ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಇನ್ನೂ ವರದಿ ಬಂದಿಲ್ಲ. ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಅವರು ಹೇಳಿದರು.