ಶವಾಗಾರದಲ್ಲಿ ಕೋವಿಡ್ ಶವಗಳು ಕೊಳೆತ ಪ್ರಕರಣ: ಪಾಲಿಕೆ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರ ಮೃತದೇಹಗಳು 16 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಮೃತರ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 30th November 2021 12:06 PM | Last Updated: 30th November 2021 12:09 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ ಶವಾಗಾರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರ ಮೃತದೇಹಗಳು 16 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಮೃತರ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆಯ ದುರ್ಗಾ (40) ಹಾಗೂ ಕೆಪಿ ಅಗ್ರಹಾರ ಮೂಲಕ ಮನಿರಾಜು (62) 2020ರ ಜುಲೈ ತಿಂಗಳಿನಲ್ಲಿ ಮೃತಪಟ್ಟಿದ್ದರು. ಮೃತದೇಹಗಳನ್ನು ಆಸ್ಪತ್ರೆಯ ಹಳೆಯ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಕೊರೋನಾ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ಶವಾಗಾರವನ್ನು ನಿರ್ಮಿಸಿ ಅಲ್ಲಿ ಶವಗಳನ್ನು ಸಾಗಿಸಲಾಗಿತ್ತು. ಆದರೆ, ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಹಳೆಯ ಶವಾಗಾರದಲ್ಲಿ ಈ ಎರಡೂ ಮೃತದೇಹಗಳು ಉಳಿದು ಹೋಗಿದ್ದವು. ಶವಗಳನ್ನು ಇರಿಸಿ 16 ತಿಂಗಳುಗಳಾದರೂ ಯಾರೊಬ್ಬರ ಗಮನಕ್ಕೂ ಈ ವಿಚಾರ ಬಂದಿರಲಿಲ್ಲ.
ಇದನ್ನೂ ಓದಿ: 16 ತಿಂಗಳಾದರೂ ಆಸ್ಪತ್ರೆಯ ಶವಾಗಾರದಲ್ಲಿಯೇ ಇದ್ದ 2 ಕೋವಿಡ್ ಮೃತದೇಹಗಳು!
ಕಳೆದ ಶನಿವಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲೆಂದು ಹೋದಾಗ ಸ್ಥಳದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಜರ್ ನಲ್ಲಿ ಎರಡು ಮೃತದೇಹಗಳಿರುವುದು ಕಂಡು ಬಂದಿತ್ತು.
ಘಟನೆ ಬೆಳಕಿಗೆ ಬಂದ ನಂತರ ತಮ್ಮ ಕುಟುಂಬ ಸದಸ್ಯರ ಮೃತದೇಹಗಳು ಪತ್ತೆಯಾದ ವಿಚಾರ ತಿಳಿದು ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಮೃತರ ಸಂಬಂಧಿಕರು, ಆಸ್ಪತ್ರೆ ವೈದ್ಯರು ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದಾಗಲೇ ಮೃತದೇಹದ ಪತ್ತೆಯಾಗಿರುವುದು ತಿಳಿದಿದ್ದು ಎಂದು ದುರ್ಗಾ ಸೀತಾರಾಮ್ ಅವರು ಸಂಬಂಧಿ ಸುಜಾತಾ ಅವರು ಹೇಳಿದ್ದಾರೆ.
ಮುನಿರಾಜು ಅವರ ಸಂಬಂಧಿ ಸತೀಶ್ ಕುಮಾರ್ ಮಾತನಾಡಿ, ಇದು ನಿರ್ಲಕ್ಷ್ಯದ ವಿಚಾರವೆಂದು ಆಸ್ಪತ್ರೆ ಹಾಗೂ ಬಿಬಿಎಂಪಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳ ದೂರವಾಣಿ ಸಂಖ್ಯೆ ನೀಡುವಂತೆ ತಿಳಿಸಿದಾಗ ನಮಗೆ ಬೆದರಿಕೆ ಹಾಕಿದರು. ಈಗಾಗಲೇ ತಡವಾಗಿದೆ, ಮತ್ತಷ್ಟು ತಡ ಮಾಡಬೇಡಿ ಎಂದು ಹೇಳಿ ಆಸ್ಪತ್ರೆಯಿಂದ ನಮ್ಮನ್ನು ಹೊರಗೆ ಕಳುಹಿಸಿದರು. ಇದೀಗ ಕ್ಷಮೆಯಾಚಿಸುತ್ತಿದ್ದಾರೆಂದು ಹೇಳಿದ್ದಾರೆ.
ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಇಎಸ್‌ಐ ಸಿಬ್ಬಂದಿ ಮತ್ತು ಬಿಬಿಎಂಪಿ ಇಬ್ಬರನ್ನೂ ಘಟನೆ ಸಂಬಂಧ ಹೊಣೆ ಮಾಡಬೇಕು ಎಂದು ಹೇಳಿದ್ದಾರೆ.