ಡಿಸೆಂಬರ್ 1 ರಿಂದ ಪ್ರವಾಸಿಗರ ಸ್ವಾಗತಿಸಲು ನಂದಿ ಬೆಟ್ಟ ಸಜ್ಜು!

ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟ ಡಿಸೆಂಬರ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಚಿಕ್ಕಬಳ್ಳಾಪುರ ಉಪ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ್ದಾರೆ.
ನಂದಿ ಬೆಟ್ಟ
ನಂದಿ ಬೆಟ್ಟ

ಚಿಕ್ಕಬಳ್ಳಾಪುರ: ಪ್ರೇಮಿಗಳ ಸ್ವರ್ಗದ ತಾಣ ನಂದಿ ಬೆಟ್ಟ ಡಿಸೆಂಬರ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಚಿಕ್ಕಬಳ್ಳಾಪುರ ಉಪ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ್ದಾರೆ.

ಭೂಕುಸಿತ ಹಿನ್ನೆಲೆಯಲ್ಲಿ ಕಳೆದ 4 ತಿಂಗಳುಗಳ ಕಾಲ ಬೆಟ್ಟಕ್ಕೆ ಹೋಗಲು ಅವಕಾಶವಿರಲಿಲ್ಲ. ಈ ಮಾರ್ಗ ಬಂದ್ ಆಗಿತ್ತು. ಹೀಗಾಗಿ ಪ್ರವಾಸಿಗರಿಗೆ ತೀರ ಬೇಸರವಾಗಿತ್ತು. ಆದರೆ, ಪ್ರವಾಸಿಗರಿಗೆ ಡಿಸೆಂಬರ್ 1 ರಿಂದ ಬೆಟ್ಟಕ್ಕೆ ಹೋಗಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ವೀಕೆಂಡ್​ನಲ್ಲಿ ನಂದಿ ಬೆಟ್ಟದತ್ತ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್​ಗಳ ಬುಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌ ಅವರ ಸೂಚನೆ ಮೇರೆಗೆ 10ನೇ ಕರ್ವ್‌ನಲ್ಲಿ ಭಾರಿ ಮಳೆಯಿಂದ ಹಾನಿಗೀಡಾದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಮರುನಿರ್ಮಾಣ ಮಾಡುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ರೂ.80 ಲಕ್ಷ ಮಂಜೂರು ಮಾಡಿದೆ.

ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿರುವ ಅಧಿಕಾರಿಗಳ ತಂಡವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರಸ್ತೆಯ ಮರುನಿರ್ಮಾಣ ಕಾರ್ಯ ನಡೆಸುತ್ತಿದೆ. ಮೇಲ್ವಿಚಾರಣೆಗೆ ಪಿಡಬ್ಲ್ಯೂಡಿ ಹಿರಿಯ ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ.

ಆರೋಗ್ಯ ಸಚಿವ ಸುಧಾಕರ್ ಕೂಡ ಕಾಮಗಾರಿ ಪರಿಶೀಲನೆ ನಡೆಸಿದ್ದು, ಪ್ರಾಯೋಗಿಕವಾಗಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅದರಂತೆ ಡಿಸೆಂಬರ್ ಒಂದರಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಸ್ವಚ್ಛತೆ ಕಾಪಾಡುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com