ಬೆಂಗಳೂರಿನಲ್ಲಿ ಕೋವಿಡ್ ಸಕ್ರಿಯ ಪ್ರಕರಣ ತಗ್ಗಿಸಲು ಹೆಣಗಾಟ

ರಾಜ್ಯದಾದ್ಯಂತ ಕೋವಿಡ್ -19 ಪ್ರಕರಣಗಳನ್ನು ತಗ್ಗಿಸುವಲ್ಲಿ ಕರ್ನಾಟಕ ಸಾಕಷ್ಟು ಸಾಧನೆ ಮಾಡಿದರೂ, ಬೆಂಗಳೂರಿನಲ್ಲಿ ದಿನನಿತ್ಯ ಡಿಸ್ಚಾರ್ಜ್ ಆಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಾದ್ಯಂತ ಕೋವಿಡ್ -19 ಪ್ರಕರಣಗಳನ್ನು ತಗ್ಗಿಸುವಲ್ಲಿ ಕರ್ನಾಟಕ ಸಾಕಷ್ಟು ಸಾಧನೆ ಮಾಡಿದರೂ, ಬೆಂಗಳೂರಿನಲ್ಲಿ ದಿನನಿತ್ಯ ಡಿಸ್ಚಾರ್ಜ್ ಆಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಇದರಿಂದ ಸಕ್ರಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.

ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 30ರ ನಡುವೆ, ಬೆಂಗಳೂರಿನಲ್ಲಿ ರೋಗಿಗಳ ದೈನಂದಿನ ಡಿಸ್ಚಾರ್ಜ್ ಸಂಖ್ಯೆ ಕಡಿಮೆಯಾಗಿದೆ. ಸೆಪ್ಟೆಂಬರ್ 20 ರಂದು, ಒಂದೇ ದಿನದಲ್ಲಿ 362 ಸೋಂಕಿತರು ಡಿಸ್ಚಾರ್ಜ್ ಆದರೆ, ಸೆಪ್ಟೆಂಬರ್ 30 ರಂದು ಈ ಸಂಖ್ಯೆ 172 ಕ್ಕೆ ಇಳಿದಿದೆ. ಇದಕ್ಕೆ ಅನುಗುಣವಾಗಿ, ದೈನಂದಿನ ಪ್ರಕರಣಗಳು ಸೆಪ್ಟೆಂಬರ್ 20 ರಂದು 213 ಮತ್ತು ಸೆಪ್ಟೆಂಬರ್ 30 ರಂದು 291 ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ, ಪ್ರತಿದಿನ ಆಸ್ಪತ್ರೆಗೆ ಸೇರಿಸಲಾದ ಪ್ರಕರಣಗಳ ಸಂಖ್ಯೆ ಬಿಡುಗಡೆಯಾದ ಪ್ರಕರಣಗಳಿಗಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಅಂತೆಯೇ,  ಇತ್ತೀಚೆಗೆ ಚೇತರಿಕೆಯ ಪ್ರಮಾಣ -ಶೇ. 98.09ಕ್ಕಿಂತ ಹೆಚ್ಚಾಗಲು ಪರದಾಡುತ್ತಿದೆ. ಜೂನ್ 1 ರಂದು ಚೇತರಿಕೆ ಪ್ರಮಾಣ ಶೇ. 86.51% ರಿಂದ ಜುಲೈ 2 ರಂದು ಶೇ. 96.78ಕ್ಕೆ ಏರಿಕೆಯಾಗಿದೆ. ಆದರೆ ಮೂರು ತಿಂಗಳ ನಂತರವೂ ಚೇತರಿಕೆಯ ಪ್ರಮಾಣ ಸುಮಾರು ಶೇ. 98 ರಲ್ಲಿಯೇ ಸುತ್ತುತ್ತಿದೆ. ಆಗಸ್ಟ್ ನಲ್ಲಿ ಶೇ. 98 ಇತ್ತು. ನಿನ್ನೆ ಸಹ ಶೇ. 98.09 ರಷ್ಟಿದೆ.

ಇನ್ನೂ ನಗರದಲ್ಲಿ ಸಕ್ರಿಯ ಪ್ರಕರಣಗಳು ಸೆಪ್ಟೆಂಬರ್ 20ರಂದು 7,318 ಇತ್ತು. ಈಗ ಅದು 7,627 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಹೆಚ್ಚಾಗಲು ತಪ್ಪು ಅಂಕಿ- ಅಂಶಗಳು ಕಾರಣ ಎಂದು ತಜ್ಞರು ಹೇಳಿದ್ದಾರೆ.

ಆದಾಗ್ಯೂ, ಸಕ್ರಿಯ ಪ್ರಕರಣಗಳ ಹೆಚ್ಚಳಕ್ಕೆ ಮುಖ್ಯವಾಗಿ ದೈನಂದಿನ ಡಿಸ್ಚಾರ್ಜ್ ಆಗುವವರ ಸಂಖ್ಯೆ ಸಮಯಕ್ಕೆ ಸರಿಯಾಗಿ ವರದಿ ಮಾಡದಿರುವುದಕ್ಕೆ ಕಾರಣ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ ಅವರು ಹೇಳಿದ್ದಾರೆ.

"ದೈನಂದಿನ ಡಿಸ್ಚಾರ್ಜ್‌ಗಳ ಸಂಖ್ಯೆಯನ್ನು ಗಮನಿಸಲು ಮನೆಯಲ್ಲಿ ಪ್ರತ್ಯೇಕವಾಗಿರುವ ಕೋವಿಡ್ ರೋಗಿಗಳಿಗೆ ಹತ್ತನೇ ದಿನದಂದು ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು 14ನೇ ದಿನದಂದು ಸಂಪರ್ಕಿಸಲಾಗುತ್ತದೆ. ಕೆಲವು ರೋಗಿಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಇದರ ಪರಿಣಾಮ ಡಿಸ್ಚಾರ್ಜ್ ಸಂಖ್ಯೆಗಳಲ್ಲಿ ವ್ಯತ್ಯಾಸವಾಗುತ್ತಿದೆ ಎಂದು”ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com