ಯಾರದೋ ಕಾರು ಮಾರಿ ಇವರ ಕಾರುಬಾರು: ಕಾರು ಕಳ್ಳರ ಬಂಧನ, ಅವರ ನೆಟ್ವರ್ಕ್ ಕಾರ್ಯಾಚರಣೆ ನಡೆಸುತ್ತಿದ್ದ ಕಥೆ...

ಖದೀಮರ ಜಾಡು ಹಿಡಿದು ಹೋದಾಗ ಸಿಕ್ಕಿಬಿದ್ದವನೇ ಜಬೀವುಲ್ಲಾ ಖಾನ್. ಈತನನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದ ಹಾಗೆ ಆಸಾಮಿ ಎಲ್ಲ ವಿವರ ಬಾಯ್ಬಿಟ್ಟಿದ್ದಾನೆ.
ಕಾರು ಕಳ್ಳತನ
ಕಾರು ಕಳ್ಳತನ

ಬೆಂಗಳೂರು: ಹೊಂಚು ಹಾಕಿ ಕದ್ದ ಕಾರು ಮಾರಾಟ ಮಾಡುವವರದೇ ಗ್ಯಾಂಗುಗಳಿರುತ್ತವೆ. ಹೀಗೆ ಮಾಡದೇ ಅಸಲಿ ಮಾಲೀಕರಿಂದಲೇ ಕಾರುಗಳನ್ನು ಪಡೆದು ಮಾರಾಟ ಮಾಡುವ ಜಾಲವೂ ಇದೆ. ಹೇಗೆ ಅಂತೀರಾ. ಈ ಸ್ಟೋರಿ ಓದಿ.

ಕೇರಳದಲ್ಲಿ ಈ ಖದೀಮರು ದೊಡ್ಡದೊಡ್ಡ ಕಂಪನಿ ಪ್ರತಿನಿಧಿಗಳು, ದೊಡ್ಡದೊಡ್ಡ ವ್ಯಾಪಾರಿಗಳು ಹೀಗೆಲ್ಲ ಸೋಗು ಹಾಕಿ ಗುತ್ತಿಗೆಗೆ ಕಾರು ತೆಗೆದುಕೊಳ್ತಿದ್ರು. ಇಂತಿಷ್ಟು ಅವಧಿಗೆ ಇಂತಿಷ್ಟು ಹಣ ಕೊಡ್ತೀವಿ ಅಂತ ಹೇಳ್ತಿದ್ರು. ಇವರ ಬೆಲೆಬಾಳುವ ಬಟ್ಟೆ, ವಾಚು, ಮೊಬೈಲ್, ಮಾತನಾಡುವ ಶೈಲಿ ನೋಡಿ ಅಸಲಿ ಮಾಲೀಕರು ಮೋಸ ಹೋಗ್ತಿದ್ರು. ಆದರೆ ಅಷ್ಟು ಬೇಗ ಇವರಿಗೆ ತಾವು ಮೋಸ ಹೋಗಿದ್ದೇವೆ ಎಂಬುದು ಅರಿವಿಗೆ ಬರುತ್ತಿರಲಿಲ್ಲ.

ಅನೇಕ ಮಾಲೀಕರು ಬ್ಯಾಂಕ್ ಸಾಲಸೋಲ ಮಾಡಿ ವಾಹನ ಖರೀದಿ ಮಾಡಿರ್ತಾರೆ. ಅಪರೂಪಕ್ಕೊಮ್ಮೆ ಟ್ರಿಪ್ ಹೋಗೋದು, ಮನೆಯಲ್ಲಿ ಏಕೆ ಸುಮ್ಮನೆ ನಿಲ್ಲಿಸಿರಬೇಕು. ಬಾಡಿಗೆ ಕೊಟ್ಟರೆ ಒಂದಷ್ಟು ದುಡ್ಡು ಬರುತ್ತೆ. ಬ್ಯಾಂಕ್ ಲೋನ್ ಆದ್ರೂ ತೀರಿಸಬಹುದು ಅಂತ ಇಂಥವರ ಇಚ್ಛೆ ಆಗಿರುತ್ತದೆ. ಆದರೆ ಬಾಡಿಗೆ ಬರೋದಿರಲಿ, ಅಸಲಿ ಬಂಡವಾಳಕ್ಕೂ ಸಂಚಕಾರ ಬರುತ್ತೆ ಅಂತ ಇವರು ಭಾವಿಸಿರೋದಿಲ್ಲ. ಆ ರೀತಿ ಈ ಖದೀಮರು ಅವರನ್ನು ವಂಚಿಸ್ತಿದ್ರು

ಹೀಗೆ ಯಾಮಾರಿಸಿ ತಂದ ಕಾರುಗಳನ್ನು ಮಾರಾಟ ಮಾಡಲು ಬೆಂಗಳೂರನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ರು. ಕಾರು ನಮ್ಮದೇ, ಪರಿಚಯದವರದೇ, ಸಂಬಂಧಿಕರದೇ ಅಂತ ಹೇಳಿ ಮಾರಾಟ ಮಾಡ್ತಿದ್ರು. ಮಾರಾಟದ ವೇಳೆ ಜೆರಾಕ್ಸ್ ದಾಖಲೆಗಳನ್ನು ಕೊಟ್ಟು ಕೆಲವೇ ದಿನದಲ್ಲಿ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಕೊಡೋದಾಗಿ ಹೇಳಿ ಹಣ ಪಡಿತಿದ್ರು. ಹೀಗೆ ಮಾಡಿದವರು ನಂತರ ನಾಪತ್ತೆಯಾಗಿಬಿಡ್ತಿದ್ರು.

ಇವತ್ತು ರಿಜಿಸ್ಟರ್ ಮಾಡಿಕೊಡ್ತಾರೆ, ನಾಳೆ ರಿಜಿಸ್ಟರ್ ಮಾಡಿಕೊಡ್ತಾರೆ ಅಂತ ದಿನ ದೂಡುತ್ತಿದ್ದವರಿಗೆ ಕೊನೆಗೆ ಜ್ಞಾನೋದಯ ಆಗ್ತಿತ್ತು. ತಾವು ಮೋಸ ಹೋಗಿರೋದು ಅರಿವಾಗ್ತಿತ್ತು. ಹೀಗೆ ಯಾಮಾರಿದವರೊಬ್ಬರು ಕೊಟ್ಟ ಸುಳಿವು ಪಡೆದ ಬೆಂಗಳೂರಿನ ಡಿಜೆ. ಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ರು.

ಖದೀಮರ ಜಾಡು ಹಿಡಿದು ಹೋದಾಗ ಸಿಕ್ಕಿಬಿದ್ದವನೇ ಜಬೀವುಲ್ಲಾ ಖಾನ್. ಈತನನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದ ಹಾಗೆ ಆಸಾಮಿ ಎಲ್ಲ ವಿವರ ಬಾಯ್ಬಿಟ್ಟಿದ್ದಾನೆ.  ಕೇರಳ ಮೂಲದ ಜುಮ್ಮಿ ಎಂಬ ಇನ್ನೊಬ್ಬ ಖದೀಮನ ಹೆಸರು ಹೇಳಿದ್ದಾನೆ. ಆತ ಇವನಿಗೆ ಗುತ್ತಿಗೆ ಹೆಸರಿನಲ್ಲಿ ತಂದ ಕಾರುಗಳನ್ನು ನೀಡ್ತಿದ್ದ. ಅವುಗಳನ್ನು ಜಬೀವುಲ್ಲಾ ಮಾರಾಟ ಮಾಡ್ತಿದ್ದ. ಬಂದ ಹಣದಲ್ಲಿ ಇಬ್ಬರು ಪಾಲು ಮಾಡಿಕೊಳ್ತಿದ್ರು.

ಈಗ ಪೊಲೀಸರು ಖದೀಮ ಜುಮ್ಮಿಯ ಜಾಡು ಹಿಡಿದು ಹೊರಟ್ಟಿದ್ದಾರೆ. ಆತನನ್ನು ಬಂಧಿಸಿ ಕರೆ ತರುವ ವಿಶ್ವಾಸ ಅವರಿಗಿದೆ. ಸದ್ಯ ಜಬೀವುಲ್ಲಾ ಮತ್ತು ಜುಮ್ಮಿ ಮಾರಾಟ ಮಾಡಿದ್ದ ಇನ್ನೋವಾ, ಸ್ವಿಪ್ಟ್ ಕಾರುಗಳು ಸೇರಿದಂತೆ ಒಟ್ಟು 9 ಕಾರುಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕಡಿಮೆ ಹಣಕ್ಕೆ ಕಾರು ಸಿಕ್ತು ಎಂಬ ಖುಷಿಯಲ್ಲಿದ್ದವರು ಅತ್ತ ಹಣವೂ ಹೋಯ್ತು ಇತ್ತ ಕಾರು ಹೋಯ್ತು ಎಂದು ಗೋಳಾಡ್ತಿದ್ದಾರೆ. ಯಾವುದೇ ವಸ್ತು ಕಡಿಮೆ ಬೆಲೆಗೆ ಸಿಗ್ತಾ ಇದೆ ಅಂದಾಗ ಸಂಪೂರ್ಣ ವಿವರ ಪಡೆಯದೇ ಹೋದರೆ ಹೀಗೆ ಯಾಮಾರಿಸುವವರು ಇರ್ತಾರೆ ಅನ್ನೋದಿಕ್ಕೆ ಇದೂ ಒಂದು ನಿದರ್ಶನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com