ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣ; 8 ಮಂದಿ ವಶಕ್ಕೆ ಪಡೆದ ಪೊಲೀಸರು

ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

ಖಾನಾಪುರದ ಕಾರ್ ಡೀಲರ್ ಅರ್ಬಾಜ್ ಅಫ್ತಾಬ್ ಮುಲ್ಲಾ ಅವರ ತಲೆ ಕಡಿದು ಆತನ ದೇಹವನ್ನು ರೈಲ್ವೇ ಹಳಿಯ ಮೇಲೆ ಎಸೆಯಲಾಗಿತ್ತು. ಸೆಪ್ಟೆಂಬರ್ 28 ರಂದು ರೈಲ್ವೇ ಸಿಬ್ಬಂದಿ ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ತಾಯಿ ನೀಜಮ್ಮ ಶೇಖ್ ಅವರು ಸ್ಥಳಕ್ಕೆ ಬಂದು ಮೃತದೇಹವನ್ನು ಗುರ್ತಿಸಿದ್ದರು. 

ಮೃತನ ತಾಯಿ ನೀಜಮ್ಮ ಶೇಖ್ ಅವರು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಕೆಲ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಮಗೆ ಹಾಗೂ ತಮ್ಮ ಮಗನಿಗೆ ಬೆದರಿಕೆಗಳನ್ನು ಹಾಕಿದ್ದರು. ಯುವತಿ ತಂದೆ ಪುಂಡಲಿಕ ಮಹಾರಾಜ ಅವರು ಈ ಸಂಘಟನೆಗೆ ಸೇರಿದವರಾಗಿದ್ದು, ಮಗನನ್ನು ಕೊಲ್ಲುವ ಬೆದರಿಕೆ ಹಾಕಿದ್ದರು. ಬಳಿಕ ಹಣದ ಮೂಲಕ ಸಂಧಾನ ಮಾಡಿಕೊಳ್ಳಲು ಮುಂದಾಗಿದ್ದರು. ಮೊದಲಿಗೆ ಅರ್ಬಾಜ್ ರೂ.7,000 ನೀಡಿದ್ದ. ಆದರೆ, ಇದಕ್ಕೆ ಒಪ್ಪದ ಅವರು, ರೂ.90,000ಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಹಣ ಕೊಡುವಂತೆ ಅರ್ಬಾಜ್'ಗೆ ನಾನು ಹೇಳಿದ್ದೆ. 

ಇದೇ ವೇಳೆ ಮಹಾರಾಜ ಅವರೂ ನನ್ನ ಬಳಿ ಬಂದು ಬೆದರಿಕೆ ಹಾಕಿದ್ದರು. ನನ್ನ ಮೇಲೆ ಈಗಾಗಲೇ 40 ಕೇಸುಗಳು ಬಾಕಿ ಇವೆ. ಮತ್ತೊಂದು ಪ್ರಕರಣ ದಾಖಲಾದರೆ ನನಗೇನೂ ಭಯವಿಲ್ಲ. ಹಲವಾರು ಬೆಂಬಲಿಗರ ನನ್ನ ಜೊತೆಗಿದ್ದು, ಖಾನಾಪುರಕ್ಕೆ ಬಂದು ಪೊಲೀಸರ ವಿಚಾರಣೆ ಎದುರಿಸುವಂತೆ ತಿಳಿಸಿದ್ದರು. ಅಲ್ಲಿಗೆ ಹೋದಾಗ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು. ಈ ವೇಳೆ ಇಬ್ಬರ ಸಂಬಂಧವನ್ನು ಅಂತ್ಯಗೊಳಿಸುವುದಾಗಿ ಯುವತಿಯ ತಾಯಿಗೂ ಹೇಳಿದ್ದೆ. 

ಎರಡು ಕುಟುಂಬಗಳೇ ಒಪ್ಪಿಗೆ ನೀಡಿ ಸಂಧಾನ ಮಾಡಿಕೊಂಡಿದ್ದಾಗ ಹೊರಗಿನವರು ಮಧ್ಯಪ್ರವೇಶಿಸುವ ಅಗತ್ಯವಾದರೂ ಏನಿದೆ? ಎಂದು ನಾನು ಪ್ರಶ್ನಿಸಿದಾಗ ಮಹರಾಜ ಅವರಿಗೆ ಅತೀವ್ರ ಕೋಪ ಬಂದಿತ್ತು. 

ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಸಂಬಂಧ ಹೊಂದುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಆದರೆ, ಈ ಪ್ರಕರಣ ಹತ್ಯೆ ಮಾಡುವವರೆಗೂ ಹೋಗುತ್ತದೆ ಎಂದು ನಾನು ತಿಳಿದಿರಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ನಾನು ಹೋರಾಟ ಮಾಡುವೆ ಎಂದು ನೀಜಮ್ಮ ಅವರು ಹೇಳಿದ್ದಾರೆ. 

ಈ ನಡುವೆ ಎಐಎಂಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಶ್ ಖಾನ್ ಪಠಾಣ್ ಅವರು ಪ್ರಕರಣ ಸಂಬಂಧ ಮಾತನಾಡಿ, ಬುಧವಾರದೊಳಗಾಗಿ ಹಂತಕರನ್ನು ಬಂಧನಕ್ಕೊಳಪಡಿಸದೇ ಹೋದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರತಿಭಟನೆಗೆ ಎಐಎಂಐಎಂ ಅಸಾದುದ್ದೀನ್ ಓವೈಸಿಯವರನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com